(ಸಾಂದರ್ಭಿಕ ಚಿತ್ರ)
ಮಂಗಳೂರು : ವಾಯುಭಾರ ಕುಸಿತ ಪರಿಣಾಮ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ “ಆರೆಂಜ್ ಅಲರ್ಟ್’ ಘೋಷಿಸಿದೆ.
ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಂಗಳವಾರದಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ವಾಯುಭಾರ ಕುಸಿತ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಪ್ರಬಲವಾಗಲಿದೆ. ಜೂ. 1 ಮತ್ತು 2ರಂದು ಕರಾವಳಿ ಭಾಗದಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗುಡುಗು ಮತ್ತು ಗಾಳಿ ಕೂಡ ಹೆಚ್ಚಾಗಿರಲಿದೆ ಎಂದು ತಿಳಿಸಿದೆ.
ತುರ್ತು ಸೇವೆಗೆ 1077ಗೆ ಕರೆ ಮಾಡಿ : ಡಿಸಿ
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಮುಂಜಾಗ್ರತಾ ದೃಷ್ಟಿಯಿಂದ ದ.ಕ. ಜಿಲ್ಲಾಡಳಿತ 24 ಗಂಟೆಗಳ ಕಂಟ್ರೋಲ್ ರೂಂ. ವ್ಯವಸ್ಥೆ ಕಲ್ಪಿಸಿದೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077ಗೆ ಕರೆ ಮಾಡಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.


Comments are closed.