ಮಂಗಳೂರು ಮೇ 20 : ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎನ್ ಕೃಷ್ಣಮೂರ್ತಿ, ಮತ್ತು ಆಯೋಗದ ಸದಸ್ಯರಾದ ಶ್ರೀ ಹೆಚ್ ವಿ ಶಿವಶಂಕರ್ ಇವರು COVID 19 ಮಹಾಮಾರಿ ವಿಪತ್ತಿನ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಪಡಿತರ ವಿತರಣೆ, ಪಡಿತರ ಗೋದಾಮುಗಳಲ್ಲಿ ಆಹಾರಧಾನ್ಯ ಸಂಗ್ರಹಣೆ, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಹಾಗೂ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯ ಪರಿಶೀಲನೆ ನಡೆಸಲು ದಿನಾಂಕ 17.5.2020 ಮತ್ತು 18.5.2020ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜಿಲ್ಲೆಯ ಐದು ತಾಲೂಕುಗಳಲ್ಲಿ ಏಳು ನ್ಯಾಯಬೆಲೆ ಅಂಗಡಿಗಳು, 6 ಅಂಗನವಾಡಿಗಳು, 2 ಅಕ್ಷರ ದಾಸೋಹ ಕೇಂದ್ರಗಳು ಮೂರು ಪಡಿತರ ಗೋದಾಮುಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಯೋಗದ ತಪಾಸಣೆಯಲ್ಲಿ ನ್ಯಾಯಬೆಲೆ ಅಂಗಡಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನ್ಯಾಯಬೆಲೆ ಅಂಗಡಿಯಲ್ಲಿದ್ದ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸರಿಯಾಗಿ ಸ್ಟಾಂಪಿಂಗ್ ಮಾಡದಿರುವುದನ್ನು ಗಮನಿಸಿ ಕಾನೂನುಮಾಪನ ಶಾಸ್ತ್ರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗೆ ಈ ಬಗ್ಗೆ ನೋಟೀಸು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣಾ ಪ್ರಮಾಣದ ಬಗ್ಗೆ ಹಾಗೂ ಜಾಗೃತ ಸಮಿತಿ ಸದಸ್ಯರ ಪಟ್ಟಿಯನ್ನು ಪ್ರಚುರಪಡಿಸದಿರುವುದನ್ನು ಗಮನಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ನಿಗದಿಪಡಿಸಿದ ಎಲ್ಲಾ ದಿನಗಳಂದು ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಬೇಕಾಗಿದ್ದು, ರವಿವಾರಗಳಂದು ಪೌಷ್ಟಿಕ ಆಹಾರವನ್ನು ನೀಡಿರುವುದಿಲ್ಲ. ಇಲಾಖೆಯಿಂದ ನೀಡಿರುವ ಮುದ್ರಿತ ವಹಿಗಳನ್ನು ನಿರ್ವಹಿಸಿರುವುದಿಲ್ಲ ನವೆಂಬರ್ ತಿಂಗಳ ನಂತರ ವೈದ್ಯರು ಅಂಗನವಾಡಿ ಕೇಂದ್ರಗಳನ್ನು ಸಂದರ್ಶಿಸಿರುವುದಿಲ್ಲ. ಸಂದರ್ಶಿಸಿದ್ದರೂ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ. ಮಂಗಳೂರು ತಾಲೂಕಿನ ಅಂಗನವಾಡಿಯಲ್ಲಿ 6 ಮಕ್ಕಳಿಗೆ ಹಾಲಿನ ಪುಡಿಯ ಕೊರತೆಯಿಂದ ಹಾಲು ಕೊಡದಿರುವುದನ್ನು ಗಮನಿಸಲಾಗಿದ್ದು ಎಲ್ಲಾ ನ್ಯೂನತೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ತಪಾಸಣೆ ನಡೆಸಿದ ಮೂರು ಪಡಿತರ ಗೋದಾಮುಗಳ ಪೈಕಿ ಮಂಗಳೂರು ನಗರಕ್ಕೆ ಸಂಬಂಧಿಸಿದ ಕೆಪಿಟಿ ಕಾಲೇಜಿನಲ್ಲಿನ ತಾತ್ಕಾಲಿಕ ಗೋದಾಮನ್ನು ಪರಿಶೀಲಿಸಿದಾಗ ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ಒಂದು ಕೊಠಡಿಗೆ ನೀರು ನುಗ್ಗಿ ಪಡಿತರ ಅಕ್ಕಿ ಒದ್ದೆಯಾಗಿರುವುದನ್ನು ಗಮನಿಸಿ, ದಾಸ್ತಾನನ್ನು ಮರದ ಕ್ರೇಟ್ ಗಳ ಮೇಲೆ ವ್ಯವಸ್ಥಿತ ವಾಗಿ ದಾಸ್ತಾನಿಡುವಂತೆ ಸೂಚನೆ ನೀಡಿದರು.



Comments are closed.