
ಬೆಂಗಳೂರು: ದೇಶದ ಮೊದಲ ಕೊರೊನಾ ಸಾವು ಸಂಭವಿಸಿರುವುದು ಕರ್ನಾಟಕದ ಕಲಬುರಗಿಯಲ್ಲಿ. ಆದರೆ ಅಲ್ಲಿಂದ ಬಳಿಕ ರಾಜ್ಯ ಸರಕಾರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಸಂಘಟಿತ ಹೋರಾಟದ ಫಲವಾಗಿ ಕೊರೊನಾ ವೈರಸ್ ಒಂದು ಹಂತದ ವರೆಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೂ ಲಾಕ್‌ಡೌನ್ ಜಾರಿಯಾದ ಬಳಿಕ ರೆಡ್ ಝೋನ್‌ಗಳ ಸಂಖ್ಯೆ 1ರಿಂದ 6ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಗುಜರಾತ್, ದಿಲ್ಲಿ, ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವಂತೆಯೇ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 512 ಪ್ರಕರಣ ದಾಖಲಾಗಿದೆ. ಇನ್ನು ಮಹಾನಗರಗಳ ಪೈಕಿ ಬೆಂಗಳೂರು ಕೂಡಾ ಕೋವಿಡ್ ವ್ಯಾಪ್ತಿಯನ್ನು ತಡೆಯುವಲ್ಲಿ ಪರಿಣಾಮಕಾರಿ ಎನಿಸಿಕೊಂಡಿದೆ.
ಕೊಡಗು, ದಾವಣಗೆರೆ, ಉಡುಪಿ ಸೇಫ್
ಮಾರ್ಚ್ 25ರಂದು ರಾಷ್ಟ್ರವ್ಯಾಪ್ತಿ ಲಾಕ್‌ಡೌನ್ ಘೋಷಣೆಯಾದಾಗ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಮಾತ್ರ (ಬೆಂಗಳೂರು ನಗರ) 15ಕ್ಕೂ ಹೆಚ್ಚು ಮಂದಿ ಕೋವಿಡ್ ಪ್ರಕರಣಗಳು ದಾಖಲಾಗಿತ್ತು. ಲಾಕ್‌ಡೌನ್ ಮೊದಲ ಹಂತವನ್ನು ಮುಗಿದಾಗ ಈ ಪಟ್ಟಿಗೆ ಮೈಸೂರು, ಬೆಳಗಾವಿ ಸೇರ್ಪಡೆಯಾದವು. ಇದೀಗ ಕೆಂಪು ವಲಯಗಳ ಪಟ್ಟಿಗೆ ಮತ್ತಷ್ಟು ಮೂರು ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಸೇರ್ಪಡೆಯಾಗಿದೆ.
ಇನ್ನೊಂದೆಡೆ ಒಂದರಿಂದ ಐದು ಪ್ರಕರಣ ದಾಖಲಾಗಿದ್ದ ಕೊಡಗು, ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಹಸಿರು ವಲಯಕ್ಕೆ ಪರಿವರ್ತನೆಯಾಗಿರುವುದು ಸಮಾಧಾನಕರ ಅಂಶವಾಗಿದೆ.
ಬೆಂಗಳೂರು ಪರಿಣಾಮಕಾರಿ
ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಕೋವಿಡ್ ಸೋಂಕು ಒಂದು ಹಂತದ ವರೆಗೆ ತಡೆಗಟ್ಟಲು ಯಶಸ್ವಿಯಾಗಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಘಟನೆಗಳನ್ನು ಹೊರತುಪಡಿಸಿದರೆ ಬೆಂಗಳೂರು ರೋಗ ವ್ಯಾಪಿಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯೆನಿಸಿದೆ.
ಏಪ್ರಿಲ್ 12ರ ವೇಳೆಗೆ ಬೆಂಗಳೂರು ನಗರದಲ್ಲಿ 34, ಮೈಸೂರು 46 ಹಾಗೂ ಬೆಳಗಾವಿಯಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಬೆಂಗಳೂರು ಕೆಂಪು ವಲಯದಲ್ಲಿ ಮುಂದುವರಿದರೂ ಇತರೆ ಮಹಾ ನಗರಗಳನ್ನು ಹೋಲಿಸಿದಾಗ ಸೋಂಕಿತರ ಸಂಖ್ಯೆ ಹಾಗೂ ಹರಡುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದು ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸುತ್ತಾರೆ.
ರೆಡ್ ಝೋನ್ 1ರಿಂದ 6ಕ್ಕೆ ಏರಿಕೆ
ಲಾಕ್‌ಡೌನ್ ಆರಂಭದ ವೇಳೆ ರಾಜ್ಯದಲ್ಲಿ ರೆಡ್ ವಲಯಗಳ ಪಟ್ಟಿಯಲ್ಲಿ ಒಂದೇ ಒಂದು ಜಿಲ್ಲೆ ಮಾತ್ರ ಗುರುತಿಸಿಕೊಂಡಿತ್ತು. ಇದು ಏಪ್ರಿಲ್ 27ರ ವೇಳೆಯಾಗುವಾಗ ಆರಕ್ಕೆ ಏರಿಕೆಯಾಗಿದೆ. ಹಾಗಿದ್ದರೂ ಹೊಸ ಪ್ರಕರಣಗಳು ರೆಡ್ ಝೋನ್‌ಗಳಿಗಷ್ಟೇ ಸೀಮಿತವಾಗಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.
ಈ ಮಧ್ಯೆ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಸರಕಾರ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಧೀನದಲ್ಲಿ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರಾಜ್ಯಕ್ಕೆ ಮರಳಲು ಸಾಧ್ಯವಾಗದೆ ಹೊರ ರಾಜ್ಯಗಳಲ್ಲಿ ಸಮಸ್ಯೆಗೆ ಸಿಲುಕಿರುವ ಕಾರ್ಮಿಕರಿಗೆ ಮೂಲಭೂತ ಸಮಸ್ಯೆಗಳ ಶೀಘ್ರ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸಹಾಯವಾಣಿ ನೆರವಾಗಲಿದೆ.
Comments are closed.