ರಾಷ್ಟ್ರೀಯ

ಕೊರೋನಾ ಭೀತಿಯ ಮಧ್ಯೆ 1 ತಿಂಗಳ ಕಂದನನ್ನ ಕೈಯಲ್ಲಿ ಹಿಡಿದುಕೊಂಡೇ ಕರ್ತವ್ಯಕ್ಕೆ ಹಾಜರಾದ IAS ಅಧಿಕಾರಿ !

Pinterest LinkedIn Tumblr

ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಅನೇಕ ಪೊಲೀಸ್ ಅಧಿಕಾರಿಗಳು, ವೈದ್ಯರು, ನರ್ಸ್ ಗಳು ತಮ್ಮ ಕುಟುಂಬದಿಂದ ದೂರವಿದ್ದು ಜನರ ಜೀವವನ್ನು ಕಾಪಾಡುತ್ತಿದ್ದಾರೆ. ತುಂಬು ಗರ್ಭಿಣಿಯಾಗಿದ್ದರು ಮಹಿಳಾ ವೈದ್ಯೆ ಕೊರೊನಾ ಟೆಸ್ಟ್ ಕಿಟ್ ತಯಾರಿಸಿ ಮರುದಿನ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಐಎಎಸ್ ಅಧಿಕಾರಿಯೊಬ್ಬರು ಮಾತೃತ್ವ ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾರೆ.

ಜಿ.ಸೃಜನಾ ಮಾತೃತ್ವ ರಜೆಯನ್ನು ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ. ಸೃಜನಾ ಅವರು ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೃಜನಾ ಅವರಿಗೆ ಗಂಡು ಮಗು ಜನಿಸಿದೆ. ಆದರೆ ಮಗು ಜನಿಸಿದ 22 ದಿನಗಳಲ್ಲೇ ಕೆಲಸಕ್ಕೆ ವಾಪಸ್ ಆಗಿದ್ದಾರೆ.

ಸೃಜನಾ ಅವರು 1 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಆರು ತಿಂಗಳ ಕಾಲ ಮಾತೃತ್ವ ರಜೆ ಪಡೆಯುವ ಅವಕಾಶವಿದೆ. ಆದರೆ ದೇಶದಲ್ಲಿ ಕೊರೊನಾ ಹಾಗೂ ಅದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಉಂಟಾಗಿರುವ ಪರಿಸ್ಥಿತಿಯ ಕಾರಣದಿಂದ ಅವರು ಕೆಲಸಕ್ಕೆ ಹಾಜರಾಗಿದ್ದಾರೆ. ಜೊತೆಗೆ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸೃಜನಾ ಅವರು, ತನ್ನ ಪತಿ ಮತ್ತು ತಾಯಿ ನನಗೆ ತುಂಬಾ ಸಂಪೋರ್ಟ್ ಮಾಡುತ್ತಿದ್ದಾರೆ. ನಾನು 4 ಗಂಟೆಗೊಮ್ಮೆ ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ ಮತ್ತೆ ಕೆಲಸಕ್ಕೆ ಬರುತ್ತೇನೆ. ಈ ವೇಳೆ ತನ್ನ ಪತಿ ಮತ್ತು ತಾಯಿ ಮಗುವನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ನಾನೊಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಇಂತಹ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ವೈರಸ್ ಭೀತಿಯನ್ನು ಹೋಗಲಾಡಿಸಲು ಜಿಲ್ಲಾಡಳಿತವು ಒಟ್ಟಾಗಿ ಪ್ರಯತ್ನಿಸುತ್ತಿದೆ. ಕ್ಷೇತ್ರದಲ್ಲಿ ಸ್ವಚ್ಛತೆಯ ಕಾರ್ಯಗಳನ್ನು ಮಾಡುವುದು, ಬಡವರಿಗೆ ಅಗತ್ಯ ಅಗತ್ಯಗಳನ್ನು ಒದಗಿಸುವುದು ಮತ್ತು ವೈರಸ್ ಇರುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದು ನನ್ನ ಕೆಲಸವಾಗಿದೆ ಎಂದು ತಮ್ಮ ಕರ್ತವ್ಯದ ಬಗ್ಗೆ ಮಾತನಾಡಿದರು.

ಕೊರೊನಾ ಹೋರಾಟದಲ್ಲಿ ನನ್ನ ಪಾತ್ರವು ಒಂದು ಸಣ್ಣ ಭಾಗವಾಗಿದೆ. ಅನೇಕ ಅಧಿಕಾರಿಗಳು ಇದೇ ರೀತಿ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸ ಮಾಡಲು ನನ್ನ ಇಡೀ ಕುಟುಂಬವು ನನಗೆ ಶಕ್ತಿಯನ್ನು ನೀಡಿದೆ ಎಂದು ಸಂತೋಷದಿಂದ ಹೇಳಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ಮಾತೃತ್ವ ರಜೆಯನ್ನೂ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಿರುವ ಐಎಎಸ್ ಅಧಿಕಾರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Comments are closed.