ಮಂಗಳೂರು, ಎಪ್ರಿಲ್.06 : ರಾಜ್ಯದಿಂದ ಮೆಡಿಕಲ್ ವ್ಯಾಸಂಗಕ್ಕೆಂದು ಸೋವಿಯತ್ ಒಕ್ಕೂಟದ ಭಾಗವಾಗಿರುವ ಉತ್ತರ ಯುರೋಪ್ ನ ಮಾಲ್ಡೋವಾ ದೇಶಕ್ಕೆ ತೆರಳಿದ್ದು ಸದ್ಯ ಕೊರೊನ ಮಹಾಮಾರಿ ಮಾಲ್ಡೋವಾ ದೇಶವನ್ನು ಕಂಗೆಡಿಸಿದ್ದು ದೇಶಕ್ಕೆ ದೇಶವೇ 60 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಆಗಿರುವ ಪರಿಣಾಮ ಅವಶ್ಯಕ ವಸ್ತುಗಳು ಸಿಗದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಪತ್ರ ಬರೆದಿರುವ ವಿದ್ಯಾರ್ಥಿಗಳು ವಾಟ್ಸ್ ಆಪ್ ಮೂಲಕ ಸಮಸ್ಯೆಯನ್ನು ಹೇಳಿಕೊಂಡಿದ್ದು ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ.
ಶಿಡ್ಲಘಟ್ಟದ ರೈತ ಉಲ್ಲೂರುಪೇಟೆ ಶ್ರೀನಿವಾಸ್ ಪುತ್ರ ತರುಣ್ ಗೌಡ, ಕುಂದಾಪುರ ವಡೇರ ಹೋಬಳಿ ನಿವಾಸಿ ಅನುಷಾ ಆರ್. ಸುವರ್ಣ ಸೇರಿದಂತೆ ರಾಜ್ಯದ ಒಟ್ಟು 15 ಮಂದಿ ಮಾಲ್ಡೋವಾದಲ್ಲಿನ ನಿಕೋಲೆ ಟೆಸ್ಟಿಮಿತನು ಸ್ಟೇಟ್ ಯೂನಿವರ್ಸಿಟಿ ಆಫ್ ಮೆಡಿಕಲ್ ಆಂಡ್ ಸೈನ್ಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಅಸಹಾಯಕ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಮೊರೆಯಿಟ್ಟಿದ್ದಾರೆ. ಇವರ ಜೊತೆಗೆ ದೇಶದ ಬೇರೆ ಬೇರೆ ಭಾಗದ 500ರಷ್ಟು ವಿದ್ಯಾರ್ಥಿಗಳು ಇದೇ ಸ್ಥಿತಿಯಲ್ಲಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನ ಪೀಡಿತರ ಸಂಖ್ಯೆ:
ಮಾಲ್ಡೋವಾ ದೇಶದಲ್ಲಿ ಜನಸಂಖ್ಯೆ 40 ಲಕ್ಷದಷ್ಟಿದೆ. ಆದರೆ ಕೊರೊನ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಅಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸರಕಾರ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಲ್ಲಿ ಹೋಂ ಕ್ವಾರಂಟೈನ್ ಮಾಡಿದೆ.
ವಿದ್ಯಾರ್ಥಿಗಳನ್ನು ಅವರವರ ದೇಶಕ್ಕೆ ಕಳುಹಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ದೇಶದ ವಿಮಾನ ನಿಲ್ದಾಣಗಳು ಮುಚ್ಚಿದ್ದು ವಿದ್ಯಾರ್ಥಿಗಳು ಆತಂಕದಲ್ಲೇ ದಿನಕಳೆಯುತ್ತಿದ್ದಾರೆ. ನಿನ್ನೆ ಒಂದೇ ದಿನ 161 ಕೊರೊನ ಪೀಡಿತರು ಪತ್ತೆಯಾಗಿದ್ದು ಈ ಮೂಲಕ ಮಾಲ್ಡೋವಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 752ರ ಗಡಿ ದಾಟಿದ್ದು 10 ಮಂದಿ ಬಲಿಯಾಗಿದ್ದಾರೆ. 31,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಬಹುದು ಎಂದು ಸರಕಾರ ಎಚ್ಚರಿಕೆ ನೀಡಿದೆ.
ಆತಂಕ ವ್ಯಕ್ತಪಡಿಸಿದ ವಿದ್ಯಾರ್ಥಿನಿ!
ಕುಂದಾಪುರ ವಡೇರ ಹೋಬಳಿ ನಿವಾಸಿ ಅನುಷಾ ಆರ್ ಸುವರ್ಣ ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದು ಬೆಂಗಳೂರಿನ ನಾರಾಯಣ ಪಿಯು ಕಾಲೇಜ್ ನಲ್ಲಿ ಪಿಯು ವಿದ್ಯಾಭ್ಯಾಸ ಮುಗಿಸಿದ್ದಾರೆ. ಸದ್ಯ ಮಾಲ್ಡೋವಾದಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದರು. ಸದ್ಯ ಊರಿಗೆ ಬರಲಾಗದೆ ಅವಶ್ಯಕ ಸಾಮಗ್ರಿ ಸಿಗದೇ ಹಾಸ್ಟೆಲ್ ನಲ್ಲಿ ಬಂಧಿಯಾಗಿರುವ ವಿದ್ಯಾರ್ಥಿಗಳು ಮುಂದೇನಾಗುತ್ತೆ ಎಂದು ತಿಳಿಯದೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾತಾಡಿದ ಅನುಷಾ “ಮಾ.17ರಿಂದ ಏರ್ ಪೋರ್ಟ್ ಮುಚ್ಚಿದೆ. ಇಲ್ಲಿ ಭಾರತೀಯ ದೂತಾವಾಸ ಕಚೇರಿ ಕೂಡಾ ಇಲ್ಲದಿರುವುದರಿಂದ ಯಾರಲ್ಲಿ ಸಮಸ್ಯೆ ಹೇಳುವುದೆಂದೇ ತಿಳಿಯುತ್ತಿಲ್ಲ. ಭಾರತ ಸರ್ಕಾರ ಈ ಬಗ್ಗೆ ಅಗತ್ಯ ಸ್ಪಂದಿಸಬೇಕು. ಈಗಾಗಲೇ ಇಲ್ಲಿ ಕೊರೊನ ಸೋಂಕು ದಿನದಿಂದ ದಿನಕ್ಕೆ ಏರುತ್ತಿದ್ದು ಇಲ್ಲಿರಲು ಭಯವಾಗುತ್ತಿದೆ. ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.


Comments are closed.