
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್ ಸೋಂಕಿಗೊಳಗಾದ ಎರಡನೇ ವ್ಯಕ್ತಿ ಬೆಂಗಳೂರು ಮೂಲದ ಟೆಕ್ಕಿ ವೆಂಕಟರಾಘವ್ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮಾ. 8ರಂದು ಆಸ್ಪತ್ರೆ ಸೇರಿದ್ದ ಇವರು 15 ದಿನಗಳ ಕಾಲ ಚಿಕಿತ್ಸೆ ಪಡೆದು ಮಾ. 23ರವರೆಗೂ ನಿರಂತರ ಚಿಕಿತ್ಸೆಯಲ್ಲಿದ್ದರು. ತಾವು ಸೋಂಕು ಗೆದ್ದ ಅನುಭವ, ಆಸ್ಪತ್ರೆಯಲ್ಲಿನ ವಾತಾವರಣ, ಆರೋಗ್ಯ ಚೇತರಿಕೆ ಹಾದಿ ಮತ್ತು ದಿನಚರಿಗಳನ್ನು ಹಂಚಿಕೊಂಡಿದ್ದಾರೆ. ವೆಂಕಟ್ ಮಾತುಗಳು…
– ಕೋವಿಡ್ 19 ವೈರಸ್ ಕೂಡಾ ಒಂದು ವೈರಲ್ ಜ್ವರದಂತೆಯೇ. ಒಂದಿಷ್ಟು ದೀರ್ಘ ಕಾಲದವರೆಗೂ ಇರುತ್ತದೆ.
– 100ರಿಂದ 102 ಡಿಗ್ರಿ ಆಸುಪಾಸು ಜ್ವರದಿಂದ ಬಳಲಿದೆ. ನನಗೆ ತಿಳಿವಳಿಕೆ ಬಂದಾಗಿನಿಂದ ನಾನು ಇಷ್ಟೊಂದು ಸುದೀರ್ಘ ದಿನಗಳ ಕಾಲ ಜ್ವರ ಅನುಭವಿಸಿದ್ದು ನೆನಪಿಲ್ಲ.
– ಸರಕಾರಿ ಆಸ್ಪತ್ರೆ ಗಳಲ್ಲಿಯೇ ಕೊರೊನಾಗೆ ಉತ್ತಮ ಚಿಕಿತ್ಸೆ ಲಭ್ಯವಿದ್ದು, ವೈದ್ಯರು ಸಾಕಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಚಿಕಿತ್ಸೆ ಬಗ್ಗೆ ಭಯ ಬೇಡ.
– ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯ ನೀಡಿದ್ದರು. ಕುಟುಂಬಸ್ಥರೊಂದಿಗೆ ವಾಟ್ಸ್ ಆ್ಯಪ್ ಮೂಲಕ ಚಾಟಿಂಗ್ ಮಾಡುತ್ತಿದ್ದೆ. ಅವರು ಧೈರ್ಯ ತುಂಬುತ್ತಿದ್ದರು. ನಿರಂತರವಾಗಿ ನಿಮ್ಹಾನ್ಸ್ ವೈದ್ಯರು ಆಪ್ತ ಸಮಾಲೋಚನೆ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದರು.
– ಆಸ್ಪತ್ರೆಯಿಂದ 15ನೇ ದಿನಕ್ಕೆ ಗುಣಮುಖನಾಗಿ ಹೊರಬರುವಾಗ ಸರಕಾರಿ ಆಸ್ಪತ್ರೆ ವೈದ್ಯರು, ಸಿಬಂದಿ ಸೇವೆ ನೆನೆದು ತೆರಿಗೆ ಪಾವತಿಸಿದ್ದಕ್ಕೂ ಸಾರ್ಥಕವಾಯಿತು ಎಂಬ ಭಾವ ನನಗೆ ಮೂಡಿತು.
– ಕೋವಿಡ್ 19 ವೈರಸ್ ವೇಗವಾಗಿ ಹರಡುವ ವೈರಸ್. ಸ್ವಚ್ಛತೆ ಮತ್ತು ಅಂತರ ಕಾಯ್ದುಕೊಳ್ಳುವುದೇ ಇದಕ್ಕೆ ಇರುವ ಮದ್ದು. ಸೋಂಕು ತಗಲಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಿ, ತಗಲಿಸಿಕೊಂಡರೂ ಪೂರ್ಣ ಗುಣಮುಖರಾಗಿ ಆಚೆ ಬರಬಹುದು ಇದಕ್ಕೆ ನಾನೇ ಸಾಕ್ಷಿ.
– ಕೋವಿಡ್ 19 ಸೋಂಕು ಎದುರಿಸಲು ಮಾನಸಿಕ ಸ್ಥೈರ್ಯ ಆವಶ್ಯಕ. ಮೊದಲೇ ಸೋಂಕಿನ ಕುರಿತು ಆತಂಕಕ್ಕೆ ಒಳಗಾಗಿ ಮಾನಸಿಕ ಸ್ಥೈರ್ಯ ಕುಗ್ಗಿಸಿಕೊಳ್ಳಬೇಡಿ. ಆತಂಕಕ್ಕೆ ಒಳಗಾಗುವ ಬದಲು ಸಾಮಾಜಿಕ ಅಂತರ ಕಾಯ್ದುಕೊಂಡು, ಸೋಂಕು ತಗಲದಂತೆ ಮುಂಜಾಗ್ರತೆ ವಹಿಸಿ.
ಮೃತ ವೃದ್ಧನ ಪುತ್ರಿ ಕೋವಿಡ್ 19 ವೈರಸ್ ಮುಕ್ತ
ಕಲಬುರಗಿ: ದೇಶದಲ್ಲೇ ಮೊದಲು ಕೋವಿಡ್-19ಗೆ ಬಲಿಯಾದ ವೃದ್ಧನಿಂದ ಸೋಂಕು ಪೀಡಿತಳಾಗಿದ್ದ ಆತನ ಪುತ್ರಿ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಾ. 10ರಂದು ಮೃತಪಟ್ಟಿದ್ದ ವೃದ್ಧನ ಆರೈಕೆ ನಡೆಸುತ್ತಿದ್ದ ಆತನ ಪುತ್ರಿಯಲ್ಲೂ ಸೋಂಕು ಕಾಣಿಸಿಕೊಂಡಿತ್ತು.
ಆಸ್ಪತ್ರೆಯಲ್ಲಿ 14 ದಿನ ಐಸೋಲೇಶನ್ ಬಳಿಕ ಮತ್ತೆ ಈಕೆಯ ಗಂಟಲು ದ್ರವ ಮಾದರಿಯನ್ನು ಮತ್ತೆ ಪರೀಕ್ಷಿಸಿದಾಗ ನೆಗೆಟಿವ್ ಎಂದು ಬಂದಿದೆ. ಇದಾದ 24 ಗಂಟೆಯೊಳಗೆ ಪರೀಕ್ಷಿಸಿದಾಗಲೂ ನೆಗೆಟಿವ್ ಬಂದಿದೆ ಎಂದು ಡಿಸಿ ಶರತ್ ಬಿ. ತಿಳಿಸಿದ್ದಾರೆ.
Comments are closed.