ಅಂತರಾಷ್ಟ್ರೀಯ

ಕೊರೊನಾದಿಂದ ಕುಸಿದ ಆರ್ಥಿಕತೆ: ಹಣಕಾಸು ಸಚಿವ ಆತ್ಮಹತ್ಯೆ

Pinterest LinkedIn Tumblr


ಫ್ರಾಂಕ್‌ಫರ್ಟ್‌: ಜಗತ್ತಿನಾದ್ಯಂತ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ಹೊಡೆತಕ್ಕೆ ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಈಗ ಈ ಆರ್ಥಿಕ ಕುಸಿತವೇ ಒಂದು ರಾಜ್ಯದ ಹಣಕಾಸು ಮಂತ್ರಿಯನ್ನು ಬಲಿ ಪಡೆದಿದೆ.

ಹೌದು, ಕೊರೊನಾದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಮಂತ್ರಿ ಥಾಮಸ್‌ ಸ್ಕೇಪರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಹೆಸ್ಸೆ ರಾಜ್ಯದ ಪ್ರಧಾನಿ ವೋಲ್ಕರ್ ಬೌಫಿಯರ್ ಭಾನುವಾರ ಖಚಿತಪಡಿಸಿದ್ದಾರೆ.

54 ವರ್ಷ ವಯಸ್ಸಿನ ಥಾಮಸ್ ಸ್ಕೇಫರ್ ರೈಲ್ವೆ ಹಳಿಗೆ ತಲೆಕೊಟ್ಟು ಸಾವಿಗೀಡಾಗಿದ್ದಾರೆ ಎಂದು ವೈಸ್‌ಬಾಡೆನ್ ಪ್ರಾಸಿಕ್ಯೂಷನ್ ಕಚೇರಿ ಹೇಳಿದೆ. ನಾವು ಆಘಾತಕ್ಕೊಳಗಾಗಿದ್ದೇವೆ, ನಮಗೆ ಈ ಘಟನೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ವೋಲ್ಕರ್ ಬೌಫಿಯರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜರ್ಮನಿಯ ಹಣಕಾಸು ರಾಜಧಾನಿ ಎಂದು ಕರೆಸಿಕೊಳ್ಳುವ ಫ್ರಾಂಕ್‌ಫರ್ಟ ಹೆಸ್ಸೆ ರಾಜ್ಯದಲ್ಲಿಯೇ ಇದೆ. ಅಲ್ಲಿ ಪ್ರಮುಖವಾದ ಡ್ಯುಚ್‌ ಬ್ಯಾಂಕ್ ಮತ್ತು ಕಾಮರ್ಸ್‌ ಬ್ಯಾಂಕ್‌ನ ಪ್ರಧಾನ ಕಚೇರಿಗಳಿವೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕೂಡ ಫ್ರಾಂಕ್‌ಫರ್ಟ್‌ನಲ್ಲಿದೆ.

10 ವರ್ಷಗಳ ಕಾಲ ಹೆಸ್ಸೆಯ ಹಣಕಾಸು ಮುಖ್ಯಸ್ಥರಾಗಿದ್ದ ಥಾಮಸ್ ಸ್ಕೇಫರ್, ಕಂಪನಿಗಳು ಮತ್ತು ಕಾರ್ಮಿಕರು ಕೊರೊನಾದಿಂದ ಉಂಟಾದ ಆರ್ಥಿಕ ಕುಸಿತವನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದರು ಎಂದು ವೋಲ್ಕರ್ ಬೌಫಿಯರ್ ಅವರನ್ನು ಸ್ಮರಿಸಿದರು.

ಆತ್ಮಹತ್ಯೆ ಮಾಡಿಕೊಂಡ ಥಾಮಸ್‌ ಸ್ಕೇಪರ್‌ ಜರ್ಮನಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು. ವೋಲ್ಕರ್ ಬೌಫಿಯರ್‌ನ ಉತ್ತರಾಧಿಕಾರಿ ಎಂದು ಹೆಸ್ಸೆ ರಾಜ್ಯದಲ್ಲಿ ಸ್ಕೇಪರ್‌ ಕರೆಸಿಕೊಳ್ಳುತ್ತಿದ್ದರು. ಥಾಮಸ್ ಸ್ಕೇಫರ್ ಸಿಡಿಯು ಪಕ್ಷದಿಂದ ಆಯ್ಕೆಯಾಗಿದ್ದರು. ಸ್ಕೇಪರ್‌ ತಮ್ಮ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Comments are closed.