ಉಡುಪಿ: ಬಹು ಬೇಡಿಕೆಯಾಗಿದ್ದು ಇತ್ತೀಚೆಗಷ್ಟೇ ಮಂಜೂರಾಗಿದ್ದ ನೂತನ ಬೆಂಗಳೂರು – ಉಡುಪಿ- ಕುಂದಾಪುರ – ಕಾರವಾರ – ವಾಸ್ಕೋ ರೈಲಿನ ಸಂಚಾರಕ್ಕೆ ಹಸಿರು ನಿಶಾನೆ ಮಾ. 7ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಬೆಂಗಳುರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ನೂತನ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ. ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಸಂಸದೆ ಶೋಭಾ ಸಹಿತ ರಾಜ್ಯದ ಹಾಗೂ ಕರಾವಳಿಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

(ಸಾಂದರ್ಭಿಕ ಚಿತ್ರ)
ಶ್ರಮ ಪಟ್ಟ ಸಮಿತಿ: ಈ ನೂತನ ರೈಲು ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣಗಳಿಗೆ ತೆರಳದೆ ಪಡೀಲ್ ಮಾರ್ಗವಾಗಿ ಸಂಚಾರ ಮುಂದುವರಿಸುವುದರಿಂದ ಉಡುಪಿ ಮತ್ತು ಅದಕ್ಕೆ ಮುಂದಿನ ಭಾಗದ ಪ್ರಯಾಣಿಕರಿಗೆ 2 ತಾಸುಗಳು ಉಳಿತಾಯವಾಗುತ್ತವೆ. ಕರಾವಳಿ ಭಾಗದವರಿಗೆ ಈ ಹೊಸ ರೈಲನ್ನು ನೀಡಬೇಕು ಎನ್ನುವ ಪ್ರಸ್ತಾವವನ್ನು ಮೊದಲಿಗೆ ಸಚಿವರ ಮುಂದೆ ಮಂಡಿಸಿದ್ದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ. ರೈಲು ಘೋಷಣೆಯಾದಂದಿನಿಂದ ಹಿತರಕ್ಷಣ ಸಮಿತಿಯು ವೇಳಾಪಟ್ಟಿ, ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸಿದ್ದರಿಂದ ರೈಲು ಸಂಚಾರದ ಹಾದಿ ಸುಗಮಗೊಂಡಿದೆ. ಇನ್ನೊಂದು ಸಂತಸದ ವಿಚಾರವೆಂದರೆ ಮೊದಲಿನ ವೇಳಾಪಟ್ಟಿಯಲ್ಲಿನ ಸಮಯಕ್ಕಿಂತಲೂ ಕರಾವಳಿ ಮಂದಿಗೆ ಅನುಕೂಲವಾಗುವ ಸಮಯದ ವೇಳಾಪಟ್ಟಿ ಅಂತಿಮಗೊಂಡಿದೆ ಎನ್ನುವುದು. ಇನ್ನು ಕಾರ್ಯಕ್ರಮಕ್ಕೆ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಸಹಿತ ಪದಾಧಿಕಾರಿಗಳಿಗೆ ಆಹ್ವಾನವೂ ಬಂದಿದೆ ಎನ್ನುವುದು ಇವರ ಶ್ರಮಕ್ಕೆ ಸಿಕ್ಕ ಮಾನ್ಯತೆ ಎಂಬುದರಲ್ಲಿ ಎರಡು ಮಾತಿಲ್ಲ.
ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ವೇಳಾಪಟ್ಟಿ ಮತ್ತು ಹೊಸ ರೈಲಿಗಾಗಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ನೀಡಿದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿಯವರು ಕರಾವಳಿಗಾಗಿ ವಾಸ್ಕೊ-ಬೆಂಗಳೂರು (ವೈಪಿಆರ್- ವಿ.ಎಸ್.ಜಿ.-ವೈಪಿಆರ್) ವಿಶೇಷ ರೈಲಿನ ಕೊಡುಗೆ ನೀಡಿದ್ದಾರೆ. ಈ ರೈಲು ವಾಸ್ಕೋ ಡ ಗಾಮದಿಂದ ಕಾರವಾರ, ಕುಮಟಾ, ಕುಂದಾಪುರ, ಉಡುಪಿ, ಸುರತ್ಕಲ್, ಪಡೀಲ್ ಹಾಗೂ ಸುಬ್ರಮಣ್ಯ ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ದಿನನಿತ್ಯ ಸಂಚರಿಸುವ ಈ ನೂತನ YPR-VSG ರೈಲು ಪಡೀಲ್ ಬೈಪಾಸ್ ಮೂಲಕ ಪ್ರಯಾಣಿಸುವುದರಿಂದ ಮಂಗಳೂರು ನಿಲ್ದಾಣ ತೆರಳದೆ ಇರುವ ಕಾರಣಕ್ಕೆ ಪ್ರಯಾಣದ ಸಮಯ ಕಡಿಮೆಯಾಗಲಿದೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ-
ಬೆಂಗಳೂರು-ವಾಸ್ಕೋ ನೂತನ ರೈಲು ಸಂಚಾರ; ಕರಾವಳಿಗರಿಗೆ ಬೆಂಗಳೂರು ಪಯಣವಿನ್ನೂ ಹತ್ತಿರ!
ಕರಾವಳಿ ಮಾರ್ಗವಾಗಿ ಮಾರ್ಚ್ 7ರಿಂದ ಓಡಲಿದೆ ಬೆಂಗಳೂರು-ವಾಸ್ಕೋ ರೈಲು!
ಬೆಂಗಳೂರು- ವಾಸ್ಕೋ ರೈಲು ಮಂಜೂರಾತಿ ನೀಡಿದ ಕೇಂದ್ರ ರೈಲ್ವೇ ಸಚಿವರಿಗೆ ಅಭಿನಂದಿಸಿದ ಸಂಸದೆ ಕರಂದ್ಲಾಜೆ
Comments are closed.