ಕರ್ನಾಟಕ

ಚಿತಾಗಾರದಲ್ಲಿ ಶವದ ಅಂತ್ಯಕ್ರಿಯೆ ನಡೆಸಲು ಅಡ್ಡಿಯಾದ ಸಾಲ!

Pinterest LinkedIn Tumblr


ಬೆಂಗಳೂರು: ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ ಸಾಲ ಕೊಟ್ಟವರೆಂದು ಬಂದ ಕೆಲವರು, ಮಹಿಳೆಯ ಅಂತ್ಯಕ್ರಿಯೆಗೆ ಅವಕಾಶ ನೀಡದೆ ಮೃತರ ಪತಿ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಈ ಸಂಬಂಧ ಕೊಡಿಗೇಹಳ್ಳಿ ನಿವಾಸಿ ನಾರಾಯಣ್‌ ಎಂಬುವರು ಕಾರ್ತಿಕ್‌ ಗೌಡ, ನಳಿನಿ, ನರಸಿಂಹ ಸೇರಿದಂತೆ 20 ಜನರ ವಿರುದ್ಧ ದೂರು ನೀಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣ್‌ ಅವರ ಪತ್ನಿ ಫೆ.16ರಂದು ಮೃತಪಟ್ಟಿದ್ದರು. ಮೃತದೇಹವನ್ನು ಅಂತ್ಯಕ್ರಿಯೆಗೆಂದು ತುಮಕೂರು ರಸ್ತೆಯ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಈ ವೇಳೆ ಸುಮಾರು 20 ಜನರೊಂದಿಗೆ ಬಂದ ಕಾರ್ತಿಕ್‌ ಎಂಬಾತ ಸಾಲ ವಾಪಸ್‌ ಕೊಡುವ ತನಕ ಶವ ಎತ್ತಲು ಬಿಡುವುದಿಲ್ಲಎಂದು ಹೇಳಿದ.

‘ನೀನು ಯಾರು? ಯಾರಿಗೆ ಹಣ ಕೊಟ್ಟಿದ್ದೀಯಾ?’ ಎಂದು ಪ್ರಶ್ನಿಸಿದಾಗ ‘ನಿನ್ನ ಪತ್ನಿಗೆ 35 ಲಕ್ಷ ರೂ. ಸಾಲ ಕೊಟ್ಟಿದ್ದೇವೆ’ ಎಂದು ಹೇಳಿ ನಮ್ಮ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ ಪುತ್ರ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ನಡೆಸಲಾಗಿದೆ. ಹಣ ಕೊಡದಿದ್ದರೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲಎಂದು ಬೆದರಿಕೆ ಹಾಕಿದ್ದಾರೆ ಎಂದು ನಾರಾಯಣ್‌ ಆರೋಪಿಸಿ ಆರ್‌ಎಂಸಿ ಯಾರ್ಡ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.