
ಹೈದರಾಬಾದ್: ವಿವಾಹಿತ ಮಹಿಳೆ ಮೇಲೆ ಮೂವರು ಯುವಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮೀಣ ಮಂಗಳಗಿರಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಗುಂಟೂರು ಜಿಲ್ಲೆಯ ತಡಪಲ್ಲಿಯ ವಿವಾಹಿತ ಸಂತ್ರಸ್ತೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ವಿಜಯವಾಡದಿಂದ ಸ್ಕೂಟರಿನಲ್ಲಿ ಬರುವಾಗ ಯುವಕನೊಬ್ಬನಿಗೆ ಸಂತ್ರಸ್ತೆ ಡ್ರಾಪ್ ನೀಡಿದ್ದರು. ಈ ವೇಳೆ ಪರಿಚಯವಾಗಿದ್ದ ಯುವಕನಿಗೆ ಆಕೆ ತಾನು ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.
ಇದನ್ನೇ ದಾಳವಾಗಿ ಬಳಸಿಕೊಂಡ ಯುವಕ ಸಂತ್ರಸ್ತೆಯನ್ನು ಸಂಪರ್ಕಿಸಿ ತನ್ನ ಸ್ನೇಹಿತರಿಗೆ ಕೆಲ ಪ್ರಮಾಣಪತ್ರಗಳು ಬೇಕಿದೆ ಎಂದು ಹೇಳಿದ್ದ. ಇದನ್ನು ನಂಬಿದ್ದ ಸಂತ್ರಸ್ತೆ ಆತನ ಮಾತಿನಂತೆ ಮಂಗಳಗಿರಿ ಮಂಡಲ ಪಟ್ಟಣಕ್ಕೆ ತೆರಳಿದ್ದರು. ಅಲ್ಲಿ ಆತ ಮಹಿಳೆಯನ್ನು ಭೇಟಿ ಮಾಡಿ ಸಮೀಪದ ಪ್ರದೇಶದ ಬಳಿ ತಮ್ಮ ಸ್ನೇಹಿತರು ಇದ್ದಾರೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದನು.
ಅಲ್ಲಿ ಮೂವರು ಯುವಕರು ಸಂತ್ರಸ್ತೆಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಸಂತ್ರಸ್ತೆಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಕಾಮುಕರಿಂದ ತಪ್ಪಿಸಿಕೊಳ್ಳಲು ರಸ್ತೆಯ ಮೇಲೆ ಬೆತ್ತಲೆಯಾಗಿ ಸುಮಾರು 200 ಮೀಟರ್ ಓಡಿದ್ದಾರೆ. ಆದರೆ ಸಂತ್ರಸ್ತೆಯನ್ನು ಬೆನ್ನಟ್ಟಿದ ಯುವಕರು ಬಲವಂತವಾಗಿ ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಸೋಮವಾರ ಗ್ರಾಮೀಣ ಮಂಗಳಗಿರಿ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ನೀಡಿದ್ದಾರೆ.
ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಶೇಷಗಿರಿ ರಾವ್ ಹೇಳಿದ್ದಾರೆ.
Comments are closed.