ಉಡುಪಿ: ಡಿಸೆಂಬರ್ 12, 2015 ರಂದು ಬೆಳಗ್ಗೆ ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಗುಡ್ಡೆಯಂಗಡಿ ಹೌಸ್ ಮೂಲದ ಆರೋಪಿ ರೋಹಿತ್, ತನ್ನ ಕ್ರೇನ್‍ನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಉಡುಪಿ ಪುತ್ತೂರು ಗ್ರಾಮದ ಸಂತಕಟ್ಟೆ ಪ್ರಭು ಜನರಲ್ ಸ್ಟೋರ್‍ನ ಎದುರು ರಸ್ತೆಯ ತೀರ ಬಲಕ್ಕೆ ಚಲಾಯಿಸಿ ಪ್ರದೀಪ ಅಚಾರ್ಯ ತನ್ನ ತಂಗಿ ಪವಿತ್ರರನ್ನು ಸಹ ಸವಾರರಾಗಿ ಕುಳ್ಳಿರಿಸಿ ಮೋಟಾರು ಸೈಕಲ್‍ನಲ್ಲಿ ಹೋಗುತ್ತಿದ್ದು ಎದುರುಗಡೆಯಿಂದ ಆರೋಪಿಯ ವಾಹನ ಬಂದು ಡಿಕ್ಕಿ ಹೊಡೆದಿದ್ದು ಇದರಿಂದ ಮೋಟಾರು ಸೈಕಲ್ ಹಿಂಬದಿಯಲ್ಲಿ ಹೋಗುತ್ತಿದ್ದ ತೀರ್ಥಹಳ್ಳಿಯ ಡಿ.ಕೆ. ಇಬ್ರಾಹಿಂ, ಚಲಾಯಿಸುತ್ತಿದ್ದ ಟೆಂಪೋ ಟ್ಯಾವೆಲರ್‍ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಪ್ರದೀಪರವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಪವಿತ್ರವರವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆಯನ್ನು ಆಗಿನ ನಿರೀಕ್ಷಕ ಶ್ರೀಕಾಂತ್. ಕೆ ರವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಪ್ರಕರಣವು ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್ ರವರು ಆರೋಪಿಗೆ ಭಾ.ದಂ.ಸಂ ಕಲಂ 279, 338, 304(ಎ) ರಡಿ 1 ವರ್ಷ 5 ತಿಂಗಳು ಸಾದಾ ಶಿಕ್ಷೆ ಮತ್ತು ರೂ. 3,000 ದಂಡ ವಿಧಿಸಿ, ಫೆಬ್ರವರಿ 7 ರಂದು ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.