ಮಂಗಳೂರು: ಕಾಮಗಾರಿ ವಿಳಂಬದಿಂದ ಭಾರೀ ಸುದ್ದಿ ಮಾಡಿದ್ದ ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೊಂಡು ವಾರ ಕಳೆಯುವುದರಲ್ಲಿ ಮೊದಲ ಅಪಘಾತ ಸಂಭವಿಸಿದ್ದು, ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪಂಪ್ ವೆಲ್ ಸಮೀಪದ ಸ್ವಾಗತ್ ಗ್ಯಾರೇಜ್‌ನ ಮುಖ್ಯಸ್ಥ ಬಜಲ್ ನಿವಾಸಿ ಪ್ರವೀಣ್ ಫೆರ್ನಾಂಡಿಸ್ (45) ಎಂದು ಗುರುತಿಸಲಾಗಿದೆ. ವೀರನಗರದ ರಮೇಶ್ ಮೆಂಡನ್ ಹಾಗೂ ಅವರ ಪತ್ನಿ ರಂಜಿನಿ ಮೆಂಡನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾರುತಿ ಆಲ್ಟೋ 800 ಕಾರೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು ಕಡೆಯಿಂದ ಉಳ್ಳಾಲ ಕಡೆಗೆ ತೆರಳುತ್ತಿತ್ತು. ವೇಗವಾಗಿ ಸಾಗುತ್ತಿದ್ದ ಆಲ್ಟೋ ಕಾರು ಇಂಡಿಯಾನ ಆಸ್ಪತ್ರೆಯ ಮುಂಭಾಗ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ಉಳ್ಳಾಲ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದು ಆಲ್ಟೊ ಕಾರು ಮೇಲ್ಸೇತುವೆಯಿಂದ ಪಕ್ಕದ ಸರ್ವಿಸ್ ರಸ್ತೆಗೆ ಎರಡು ಬಾರಿ ಪಲ್ಟಿಯಾಗಿದೆ.
ರಮೇಶ್ ಎಂಬವರ ಡಸ್ಟರ್ ಕಾರನ್ನು ನಂತೂರು ಸಮೀಪದ ತಾರೆತೋಟದ ಗ್ಯಾರೇಜ್‌ವೊಂದಕ್ಕೆ ಸರ್ವಿಸ್‌ಗಿಟ್ಟಿದ್ದು, ಬಳಿಕ ಗ್ಯಾರೇಜ್ ಮುಖ್ಯಸ್ಥರಾದ ಪ್ರವೀಣ್ ಫೆರ್ನಾಂಡಿಸ್ ಅವರು ಟೆಸ್ಟ್ ಡ್ರೈವ್ ಮಾಡಿಕೊಂಡು ಉಳ್ಳಾಲ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಪ್ರವೀಣ್ ಫೆರ್ನಾಂಡಿಸ್ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆಲ್ಟೋ ಕಾರಿನಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಆಲ್ಟೋ ಕಾರಿನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







Comments are closed.