ಕರಾವಳಿ

ಕಾರವಾರದಲ್ಲಿ ಮಾಘ ಚೌತಿ – ನೂರಾರು ಮನೆಯಲ್ಲಿ ಗಣೇಶ ಜಯಂತಿ ಆಚರಣೆ

Pinterest LinkedIn Tumblr


ಕಾರವಾರ(ಜ.28) : ನಿನ್ನೆ ಗಣಪತಿ‌ ದೇವರ ಜಯಂತಿಯ ಹಿನ್ನಲೆಯಲ್ಲಿ ಮಾಘ ಚೌತಿಯನ್ನ ಉತ್ತರ ಕನ್ನಡ‌ ಜಿಲ್ಲೆಯ ಕಾರವಾರದ ಸುತ್ತಮುತ್ತ ಗಣೇಶ ವಿಗೃಹ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಲಾಯಿತು.

ಮಂಗಳವಾರ ಮಾಘ ಚೌತಿ. ಗಣಪತಿ ಹುಟ್ಟಿದ ದಿನ ಎನ್ನಲಾದ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲಿಯೇ ಗಣಪತಿಯನ್ನ ಇಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರದಲ್ಲಿ ಹಿಂದಿನಿಂದ ಬಂದಿದೆ. ಗಣೇಶ ಚತುರ್ಥಿಯ ಸಮಯದ ನಾನಾ ಕಾರಣಗಳಿಂದ ಸಮಸ್ಯೆಗಳಿಂದ ಗಣಪತಿಯನ್ನ ಇಡಲು ಸಾಧ್ಯವಾಗದಿರುವವರು ಮಾಘ ಚೌತಿಯಂದು ಗಣೇಶನನ್ನು ಇಟ್ಟು ಪೂಜೆ ಮಾಡುತ್ತಾರೆ. ಜೊತೆಗೆ ಚತುರ್ಥಿ ವೇಳೆ ಪ್ರತಿವರ್ಷ ಸತತವಾಗಿ ಮೂರ್ತಿಯನ್ನ ಇಟ್ಟು ಪೂಜೆ ಮಾಡಲು ಸಾಧ್ಯವಾಗದವರು ಇಂದು ಮನೆ ಮನೆಗಳಲ್ಲಿ ಗಣಪತಿ ಮೂರ್ತಿಯನ್ನ ಇಟ್ಟು ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.

ಇಷ್ಟೇ ಅಲ್ಲದೇ ಕಾರವಾರ ತಾಲೂಕಿನ ಮಾಜಾಳಿ ಸೇರಿದಂತೆ ವಿವಿದೆಡೆ ಸಾರ್ವಜನಿಕ ಗಣಪತಿಯನ್ನ ಸಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಗಣೇಶ ಹಬ್ಬದ ರೀತಿಯಲ್ಲಿಯೇ ಸಂಭ್ರಮಿಸಿದರು. ಕಳೆದ 13 ವರ್ಷಗಳಿಂದ ಸತತವಾಗಿ ಮಾಘ ಚತುರ್ಥಿಯನ್ನ ಆಚರಣೆ ಮಾಡಿಕೊಂಡು ಪ್ರತಿವರ್ಷ ಅದ್ದೂರಿಯಾಗಿ ಮಾಡಿಕೊಂಡು ಬರಲಾಗುತ್ತಿದೆ.

ನೂರಾರು ಮನೆಯಲ್ಲಿ ಗಣೇಶ ಜಯಂತಿ ಆಚರಣೆ

ಇನ್ನು ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಿಸುತ್ತಾರೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜೊತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಕಾರವಾರದಲ್ಲಿ ಇರುವ ಹಿನ್ನಲೆಯಲ್ಲಿ ಮಾಘ ಚೌತಿಯನ್ನ ಕಾರವಾರದಲ್ಲಿ ಸಹ ಆಚರಣೆ ಮಾಡುತ್ತಾ ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಬೇರೆಯಾವ ತಾಲೂಕಿನಲ್ಲೂ ಹಬ್ಬವನ್ನ ಆಚರಿಸುವುದಿಲ್ಲ.

ಇನ್ನು ಮಾಘ ಚೌತಿಯಂದು ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಒಂದೇ ದಿನ ಪೂಜೆ ಸಲ್ಲಿಸಿ ರಾತ್ರಿ ವಿಸರ್ಜನೆಯನ್ನ ಮಾಡಲಾಗುತ್ತದೆ. ಮಾಘ ಚೌತಿ ಗಣಪತಿ ಹುಟ್ಟಿದ ದಿನ ಆಗಿರುವುದರಿಂದ ಗಣಪತಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಿಟ್ಟಿನಲ್ಲಿ ಹಲವರು ಹರಕೆಯನ್ನ ಸಹ ಕಟ್ಟಿಕೊಂಡು ಗಣಪತಿಯನ್ನ ಇಟ್ಟು ಪೂಜೆ ಸಲ್ಲಿಸಿ ರಾತ್ರಿ ವಿಸರ್ಜಿಸುತ್ತಾರೆ.

ಇದು ಮಹಾರಾಷ್ಟ್ರ, ಗೋವಾ ಹೊರತುಪಡಿಸಿ ರಾಜ್ಯದಲ್ಲಿ ಕಾರವಾರ ತಾಲೂಕಿನಲ್ಲಿ ಮಾತ್ರ ಹೆಚ್ಚಾಗಿ ಆಚರಣೆ ಮಾಡುವ ವಿಶೇಷ ಸಂಪ್ರದಾಯ ಅನ್ನುವುದು ಸ್ಥಳೀಯರ ಅಭಿಪ್ರಾಯ.ಮನೆ ಮಾಡಿದ ಸಂಭ್ರಮ, ಮಾಘ ಚೌತಿಯಂದು ಗಣಪತಿಯ ಜಯಂತಿ

ಮಾಘ ಚೌತಿ ಹಬ್ಬದ ಹಿನ್ನಲೆ ಕಾರವಾರ ತಾಲೂಕಿನ ವಿವಿಧ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಜನರು ಭಕ್ತಿಯಿಂದ ಬೆಳಿಗ್ಗೆಯೇ ಮನೆಗಳಿಗೆ ಗಣಪತಿ ಮೂರ್ತಿಯನ್ನ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ನಾನಾ ಭಾಗದಲ್ಲಿ ಕಂಡು ಬಂದಿತ್ತು. ಕಾರವಾರದಲ್ಲಿ ಎರಡನೇ ಗಣಪತಿ ಹಬ್ಬ ಎಂದೇ ಈ ಮಾಘ ಚೌತಿ ಹಬ್ಬವನ್ನ ಕರೆಯಲಿದ್ದು ಗಣೇಶ್ ಚತುರ್ಥಿಯ ಸಂಭ್ರಮದ ಮಾದರಿಯಲ್ಲಿಯೇ ಈ ದಿನ ಹಬ್ಬವನ್ನ ಜನರು ಆಚರಿಸಿದರು.

ಒಟ್ಟಿನಲ್ಲಿ ಮಾಘ ಚೌತಿ ಹಬ್ಬದ ಹಿನ್ನಲೆ ಕಡಲನಗರಿ ಕಾರವಾರದಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಜನರು ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನ ಮತ್ತೊಮ್ಮೆ ಆಚರಿಸಿದ್ದು ನಿಜಕ್ಕೂ ವಿಶೇಷವಾಗಿದೆ.

Comments are closed.