
ದುಬೈ/ವಾಷಿಂಗ್ಟನ್: ಕಳೆದ ವಾರ ಅಮೆರಿಕ ವಾಯು ದಾಳಿಗೆ ಮೃತಪಟ್ಟ ಕ್ವಾಡ್ಸ್ ಫೋರ್ಸ್ ಕಮಾಂಡರ್ ಖಾಸಿಮ್ ಸೊಲೈಮಾನಿ ಅಂತ್ಯಕ್ರಿಯೆ ಸೋಮವಾರ ನಡೆದಿದ್ದು, ಪಾರ್ಥಿವ ಶರೀರ ಮೆರವಣಿಗೆ ವೇಳೆ ತೆಹರಾನ್ನ ರಸ್ತೆಯಲ್ಲಿ ಲಕ್ಷಾಂತರ ಜನರು ನೆರೆದು, ದೇಶದ ಸೇನಾಧಿಕಾರಿ ಮರಣಕ್ಕೆ ಕಂಬನಿ ಮಿಡಿದರು. ಈ ವೇಳೆ ಮಾತನಾಡಿದ ಸೊಲೈಮಾನಿ ಮಗಳು ನನ್ನ ತಂದೆಯ ಸಾವು ಅಮೆರಿಕಕ್ಕೆ ಮುಂದೆ ಕರಾಳ ದಿನಗಳು ಕಾದಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
1989ರಂದು ಇಸ್ಲಾಮಿಕ್ ರಿಪಬ್ಲಿಕ್ ಸಂಸ್ಥಾಪಲ ಅಯಾತೊಲ್ಲಾ ರುಹೊಲ್ಲಾ ಖೊಮಿನಿ ಅವರ ಅಂತ್ಯಕ್ರಿಯೆಯಲ್ಲಿ ತೆಹರಾನ್ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನ ಸಮೂಹ ನೆರೆದಿತ್ತು. ಅದಾದ 30 ವರ್ಷಗಳ ಬಳಿಕ ಈಗ ಖಾಸಿಮ್ ಸೊಲೈಮಾನಿ ಅಂತ್ಯಕ್ರಿಯೆಯಲ್ಲಿ ಈ ಬೃಹತ್ ಪ್ರಮಾಣದಲ್ಲಿ ಜನ ಸಾಗರ ಹರಿದುಬಂದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ತಮ್ಮ ತಂದೆಯ ಸಾವಿನ ವಿಚಾರವಾಗಿ ಸರ್ಕಾರಿ ಟೆಲಿವಿಷನ್ನಲ್ಲಿ ಮಾತನಾಡಿದ ಸೊಲೈಮಾನಿ ಮಗಳು ಜಿನಬ್ ಸೊಲಿಮಾನಿ, ಹುಚ್ಚ ಟ್ರಂಪ್, ನನ್ನ ತಂದೆಯ ಸಾವಿನೊಂದಿಗೆ ಎಲ್ಲವೂ ಮುಗಿದುಹೋಯಿತು ಎಂದು ಯೋಚಿಸಬೇಡಿ. ಅಮೆರಿಕಕ್ಕೆ ಮುಂದೆ ಕರಾಳ ದಿನಗಳು ಕಾದಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸೊಲೈಮಾನಿ ಹತ್ಯೆಯ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸೊಲೈಮಾನಿ ಸಾವಿಗೆ ಇರಾನ್ ಸರ್ಕಾರ ಪ್ರತೀಕಾರದ ಭರವಸೆಯನ್ನು ನೀಡಿದೆ. ಜೊತೆಗೆ ಅಮೆರಿಕ ಸೇನಾ ಪಡೆಗಳು ದೇಶ ತೊರೆಯಬೇಕು ಎಂದು ಇರಾನ್ ಸಂಸತ್ ಆದೇಶ ಹೊರಡಿಸಿದೆ. ಅಮೆರಿಕದ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆಯನ್ನು ಇರಾನ್ ನೀಡಿದೆ.
ಇರಾನ್ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇರಾನ್ನ 52 ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿಯೂ ಹೇಳಿದ್ದಾರೆ. ಒಂದು ವೇಳೆ ಇರಾನ್ ಅಮೆರಿಕನ್ನರು ಅಥವಾ ಅಮೆರಿಕದ ಯಾವುದೇ ಪ್ರದೇಶದ ಮೇಲೆ ದಾಳಿ ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಹೇಳಿದ್ದಾರೆ. ಅಲದೇ, ಇರಾನ್ನಲ್ಲಿ ನಾವು ದುಬಾರಿ ವೆಚ್ಚದ ಅತ್ಯಾಧುನಿಕ ವಾಯು ನೆಲೆಯನ್ನು ಹೊಂದಿದ್ದೇವೆ. ಅದನ್ನು ನಿರ್ಮಿಸಲು ನಾವು ಶತಕೋಟಿ ಡಾಲರ್ ಹಣ ಖರ್ಚು ಮಾಡಿದ್ದೇವೆ. ಇದನ್ನು ಮರುಪಾವತಿಸದ ಹೊರತು ನಮ್ಮ ಸೇನಾ ಪಡೆಗಳು ಅಲ್ಲಿಂದ ಹೊರಡುವುದಿಲ್ಲ. ಒಂದು ವೇಳೆ ಸ್ನೇಹಪೂರ್ವಕವಲ್ಲದ ನಡೆಯಿಂದ ನಮ್ಮ ಸೇನಾಪಡೆಗಳನ್ನು ಅಲ್ಲಿಂದ ಹೊರಹಾಕಿದರೆ ಹಿಂದೆಂದೂ ಕೇಳರಿಯದ ರೀತಿ ಇರಾನ್ ಮೇಲೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
Comments are closed.