
ತುಮಕೂರು: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಕೃಷಿ ಸಮ್ಮಾನ್ ಅನುಷ್ಠಾನ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ಪ್ರಧಾನ ಸಮಾರಂಭದಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ ಅಂತರ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಡಿಸೆಂಬರ್ 22 ರಂದು ನಗರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಜ. 2ರಂದು ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದಾಗಿ ಪ್ರಕಟಿಸಿದ್ದರು. ಹಾಗೂ ಸ್ಥಳೀಯ ಶಾಸಕ ಜಿಬಿ ಜ್ಯೋತಿಗಣೇಶ್ ಮತ್ತು ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್ ಅವರೊಂದಿಗೆ ವೇದಿಕೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದ್ದರು. ಈ ಸುದ್ದಿ ಹೊರಬಿದ್ದ ದಿನದಿಂದಲೂ ತುಮಕೂರಿಗೆ ರಾಜ್ಯ ಮಟ್ಟದ ಹಲವು ಬಿಜೆಪಿ ನಾಯಕರು, ರಾಜ್ಯ ಹಾಗೂ ಕೇಂದ್ರ ಸಚಿವರುಗಳು ಬಂದು ಹೋಗಿದ್ದಾರೆ. ಆದರೆ ಜಿಲ್ಲೆಯಲ್ಲೇ ಇರುವ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ ಒಮ್ಮೆಯೂ ತುಮಕೂರಿಗೆ ಬಂದು ಸಿದ್ಧತೆಗಳನ್ನು ಪರಿಶೀಲಿಸಿಲ್ಲ.
ಡಿ.31ರಂದು ಸಿಎಂ ಯಡಿಯೂರಪ್ಪ ಬಂದ ದಿನ ಮಾತ್ರ ಅವರ ಜೊತೆಗೆ ಕಾಣಿಸಿಕೊಂಡಿದ್ದು, ಬೇರೆಲ್ಲೂ ಅವರ ಸುಳಿವಿಲ್ಲ.
ಮೋದಿ ಕಾರ್ಯಕ್ರಮದ ಸಂಪೂರ್ಣ ಹೊಣೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ವಸತಿ ಸಚಿವ ವಿ ಸೋಮಣ್ಣ ಅವರ ಹೆಗಲಿಗೆ ಹಾಕಿದ್ದಾರೆ. ಹೀಗಾಗಿ ಸೋಮಣ್ಣ, ಕಳೆದೊಂದು ವಾರದಿಂದ ನಿತ್ಯವೂ ತುಮಕೂರಿಗೆ ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇಡೀ ಸಮಾರಂಭದ ಉಸ್ತುವಾರಿಯನ್ನು ಸಚಿವ ವಿ ಸೋಮಣ್ಣ ಅವರೊಬ್ಬರೇ ನಿರ್ವಹಿಸುತ್ತಿದ್ದಾರೆ.
ಜಿಲ್ಲಾಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ, ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಒಮ್ಮೆಯೂ ಅಧಿಕಾರಿಗಳ ಸಭೆ ನಡೆಸಿಲ್ಲ. ಕಾರ್ಯಕ್ರಮದ ಮುನ್ನಾದಿನ ಕೇಂದ್ರ ಸಚಿವರುಗಳು ಬಂದಾಗಲೂ ಅವರನ್ನು ಭೇಟಿ ಮಾಡಲಿಲ್ಲ. ಅದೇ ದಿನ ಸ್ವಕ್ಷೇತ್ರದಲ್ಲಿ ಶಂಕುಸ್ಥಾಪನೆ ನೆಪದಲ್ಲಿ ಅವರು ಸಚಿವ ಭೇಟಿಯಿಂದ ದೂರ ಉಳಿದರು. ಸದಾ ಸಿಎಂ ಯಡಿಯೂರಪ್ಪ ಬೆನ್ನಿಗಿರುತ್ತಿದ್ದ ಮಾಧುಸ್ವಾಮಿ ಇಂಥಹ ಸಂದರ್ಭದಲ್ಲಿ ಕೈ ಕೊಟ್ಟರೇ ಅಥವಾ ಅಸಮಾಧಾನ ಹೊಂದಿದ್ದಾರೆಯೇ? ಇಲ್ಲವೇ ಯಾರ ಮೇಲಾದರೂ ಮುನಿಸಿಕೊಂಡಿದ್ದಾರೆಯೇ ಎನ್ನುವುದು ಮಾತ್ರ ನಿಗೂಢವಾಗಿದೆ.
Comments are closed.