
ವಾಷಿಂಗ್ಟನ್: ಕ್ರಿಸ್ಮಸ್ ಹಬ್ಬಕ್ಕೆ ಎರಡು ದಿನದ ಮುನ್ನವೇ ಬಿಳಿ ಗಡ್ಡಧಾರಿ ವ್ಯಕ್ತಿಯೊಬ್ಬ ಏಕಾಏಕಿ ಬ್ಯಾಂಕ್ ಗೆ ನುಗ್ಗಿ ದರೋಡೆ ಮಾಡಿದ ನಂತರ ಹಣವನ್ನು ತಂದು ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳತ್ತ ಎಸೆದು ಕ್ರಿಸ್ಮಸ್ ಶುಭಾಶಯ ಕೋರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಈ ಘಟನೆ ಕುರಿತು ಕೊಲೋರಾಡೋ ಪೊಲೀಸರು ಪ್ರಕಟಣೆಯಲ್ಲಿ ಖಚಿತಪಡಿಸಿದ್ದು, ಬಿಳಿಗಡ್ಡಧಾರಿ ವೃದ್ಧ ವ್ಯಕ್ತಿಯೊಬ್ಬ ಕೊಲೋರಾಡೋದಲ್ಲಿನ ಅಕಾಡೆಮಿ ಬ್ಯಾಂಕ್ ಗೆ ನುಗ್ಗಿ ಅಪರಿಚಿತ ಆಯುಧದಿಂದ ಬೆದರಿಕೆಯೊಡ್ಡಿ ಹಣ ದರೋಡೆ ಮಾಡಿದ್ದಾನೆ. ಅಲ್ಲದೇ ಭಾರೀ ಮೊತ್ತದ ಹಣವನ್ನು ತೆಗೆದುಕೊಂಡು ಹೋಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿರುವುದಾಗಿ ತಿಳಿಸಿದ್ದಾರೆ.
ಬ್ಯಾಗ್ ನೊಳಗೆ ತುಂಬಿಸಿಕೊಂಡಿದ್ದ ನೋಟಿನ ಕಂತೆಗಳನ್ನು ದಾರಿ ಹೋಕರತ್ತ ಎಸೆಯುತ್ತಾ…ಮೇರಿ ಕ್ರಿಸ್ಮಸ್ ಎಂದು ಹೇಳುತ್ತಿದ್ದ ಎಂದು ಪ್ರತ್ಯಕ್ಷದರ್ಶಿ ಡಿಯೋನ್ ಪಾಸ್ಕರ್ ಸ್ಥಳೀಯ ಕೆಕೆಟಿವಿ 11 ನ್ಯೂಸ್ ಗೆ ತಿಳಿಸಿದ್ದಾರೆ. ಬ್ಯಾಂಕ್ ದರೋಡೆಗೈದ ವ್ಯಕ್ತಿ 65 ವರ್ಷದ ಡೇವಿಡ್ ವೇಯ್ನೆ ಒಲಿವೇರಾ ಎಂದು ಗುರುತಿಸಿದ್ದು, ನಂತರ ಸ್ಟಾರ್ ಬಕ್ಸ್ ಸಮೀಪ ಬಂಧಿಸಲಾಯ್ತು ಎಂದು ಕೊಲೋರಾಡೋ ಪೊಲೀಸರು ವಿವರಿಸಿದ್ದಾರೆ.
ಒಲಿವೇರಾ ಬಂಧನದ ವೇಳೆ ಆತ ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಕುರುಹು ಕಂಡುಬಂದಿಲ್ಲವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಸ್ತೆಯ ಮೇಲೆ ಎಸೆದಿದ್ದ ಹಣವನ್ನು ದಾರಿಯಲ್ಲಿ ಸಾಗುತ್ತಿದ್ದ ಕೆಲವರು ಬ್ಯಾಂಕ್ ಗೆ ವಾಪಸ್ ತಂದು ಕೊಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
Comments are closed.