ರಾಷ್ಟ್ರೀಯ

ರಾಹುಲ್ ಗಾಂಧಿ ‘ರೇಪ್ ಇನ್ ಇಂಡಿಯಾ’ ಹೇಳಿಕೆ ; ವರದಿ ಕೇಳಿದ ಚುನಾವಣಾ ಆಯೋಗ

Pinterest LinkedIn Tumblr


ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ‘ರೇಪ್ ಇನ್ ಇಂಡಿಯಾ’ ಹೇಳಿಕೆ ಇದೀಗ ಅವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಎದುರಾಗಿದೆ.

ಕಳೆದ ವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಟೀಕಿಸುವ ಭರದಲ್ಲಿ ದೇಶದೆಲ್ಲೆಡೆ ಈಗ ಎಲ್ಲೆಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಹಾಗಾಗಿ ಇದು ಮೇಕ್ ಇನ್ ಇಂಡಿಯಾ ಅಲ್ಲ ‘ರೇಪ್ ಇನ್ ಇಂಡಿಯಾ’ ಎಂದು ಟೀಕಿಸಿದ್ದರು.

ಇದೀಗ ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್ ಚುನಾವಣಾ ಅಧಿಕಾರಿಗಳಿಂದ ಆಯೋಗವು ವಿಸ್ತೃತ ವರದಿಯನ್ನು ಕೇಳಿದೆ. ರಾಹುಲ್ ಗಾಂಧಿ ಅವರ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರುನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಹುಲ್ ಅವರ ಈ ಹೇಳಿಕೆ ಸಂಸತ್ತಿನಲ್ಲಿ ಪ್ರತಿಧ್ವನಿಸಿತ್ತು ಮತ್ತು ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ರಾಹುಲ್ ಅವರ ಕ್ಷಮೆಗೆ ಆಗ್ರಹಿಸಿದ್ದವು. ಆದರೆ ತನ್ನ ಹೇಳಿಕೆ ಕುರಿತಾಗಿ ಕ್ಷಮೆ ಕೇಳಲು ರಾಹುಲ್ ಸ್ಪಷ್ಟವಾಗಿ ನಿರಾಕರಿಸಿದ್ದರು. ಮಾತ್ರವಲ್ಲದೇ ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎಂದು ಹೇಳುವ ಮೂಲಕ ಇನ್ನೊಂದು ವಿವಾದವನ್ನು ತನ್ನ ಮೇಲೆ ಎಳೆದುಕೊಂಡಿದ್ದರು.

Comments are closed.