ರಾಷ್ಟ್ರೀಯ

ಯೋಧರಿಗಾಗಿಯೇ ಮ್ಯಾಟ್ರಿಮೋನಿಯಲ್‌ ಪೋರ್ಟಲ್‌

Pinterest LinkedIn Tumblr


ಹೊಸದಿಲ್ಲಿ: ಗಡಿ ಕಾಯುವ ಯೋಧರಿಗಾಗಿ ಇದೇ ಮೊದಲ ಬಾರಿಗೆ ವೈವಾಹಿಕ ವೆಬ್‌ಸೈಟ್‌ವೊಂದನ್ನು ಶುರು ಮಾಡಲಾಗಿದೆ. ಇಂಡೋ-ಟಿಬೆಟನ್‌ ಬಾರ್ಡರ್‌ ಪೊಲೀಸ್ (ಐಟಿಬಿಪಿ) ಅದರಲ್ಲಿ ಅವಿವಾಹಿತ, ವಿಚ್ಛೇದನ ಪಡೆದವರು, ವಿಧವೆಯರಿಗಾಗಿ ಬಾಳ ಸಂಗಾತಿಯನ್ನು ಪಡೆಯಲು ಅನುಕೂಲವಾಗುವಂತೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಚೀನ ಜತೆಗೆ ಹೊಂದಿರುವ ಗಡಿಯನ್ನು ಕಾಯುತ್ತಿರುವ ಐಟಿಬಿಪಿಯಲ್ಲಿ 1 ಸಾವಿರ ಮಹಿಳೆಯರು, 2,500 ಪುರುಷರು ವಿವಿಧ ರ್‍ಯಾಂಕ್‌ಗಳ ಹುದ್ದೆಯಲ್ಲಿ ಕಾರ್ಯವೆಸಗುತ್ತಿದ್ದಾರೆ. ದೂರದ ಪ್ರದೇಶಗಳಲ್ಲಿ ಕರ್ತವ್ಯದಲ್ಲಿ ಇರುವ ಸಂದರ್ಭ ವಿವಾಹಾಪೇಕ್ಷಿಗಳಿಗಾಗಿ ಪದೇ ಪದೆ ಪ್ರಯಾಣ ನಡೆಸಲೂ ಅನಾನುಕೂಲ ಇರುತ್ತದೆ.

ಐಟಿಬಿಪಿ ಅಧಿಕಾರಿಗಳೇ ಸಂಗ್ರಹಿಸಿದ ಮಾಹಿತಿ ಪ್ರಕಾರ 333 ಮಂದಿ ತಮ್ಮ ತಮ್ಮ ಸಂಘಟನೆಯಿಂದಲೇ ಬಾಳ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಪ್ರಥಮ ಆದ್ಯತೆ ಎಂದಿದ್ದಾರೆ. ಇದರಿಂದಾಗಿ ಐಟಿಬಿಪಿ ಮಹಾ ನಿರ್ದೇಶಕ ಎಸ್‌.ಎಸ್‌. ದೇಸ್ವಾಲ್‌ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ, ಸಿಬಂದಿಗಾಗಿಯೇ ವೈವಾಹಿಕ ವೆಬ್‌ಸೈಟ್‌ ಸಿದ್ಧಪಡಿಸಿಕೊಡುವ ಬಗ್ಗೆ ಸೂಚನೆ ನೀಡಿದ್ದಾರೆ.

ಈ ಉದ್ದೇಶಕ್ಕಾಗಿ ಡಿ. 9ರಿಂದ ಹೊಸ ಲಿಂಕ್‌ ಒಂದನ್ನು ಶುರು ಮಾಡಲಾಗಿದೆ. ಅದರಲ್ಲಿ ಇದುವರೆಗೆ 150 ಮಂದಿ ಆಸಕ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ಹೇಳಿದ್ದಾರೆ. ಯಾರೇ ಒಬ್ಬರು ಮತ್ತೊಬ್ಬರ ವಿವರಗಳನ್ನು ನೋಡಿ ಒಪ್ಪಿಕೊಂಡು ಆಸಕ್ತಿ ವ್ಯಕ್ತಪಡಿಸಿದರೆ, ಅಂಥವರ ವಿವರಗಳನ್ನು ಎಸ್‌ಎಂಎಸ್‌, ಇ-ಮೇಲ್‌ ಮೂಲಕ ಕಳುಹಿಸಲಾಗುತ್ತದೆ.

Comments are closed.