ಕರ್ನಾಟಕ

ಉತ್ತರ ಕರ್ನಾಟಕದಲ್ಲಿ ನಾಲ್ಕು ತಿಂಗಳುಗಳ‌ಲ್ಲಿ 67ಕ್ಕೂ ಹೆಚ್ಚು ಬಡ ಹೆಣ್ಣು ಮಕ್ಕಳ ಮಾರಾಟ

Pinterest LinkedIn Tumblr


ಧಾರವಾಡ: ಮೂರು ವರ್ಷಗಳ ಹಿಂದೆ ತೀವ್ರ ಸ್ವರೂಪ ಪಡೆದುಕೊಂಡು ಪೊಲೀಸರ ಕಠಿನ ಕ್ರಮದಿಂದ ಕ್ಷೀಣಿಸಿದ್ದ ಹೆಣ್ಣು ಮಕ್ಕಳ ಮಾರಾಟ ಜಾಲ ಉತ್ತರ ಕರ್ನಾಟಕದಲ್ಲಿ ಮತ್ತೆ ಹೆಡೆ ಎತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ 67ಕ್ಕೂ ಹೆಚ್ಚು ಯುವತಿಯರು ಉತ್ತರ ಭಾರತಕ್ಕೆ ಮಾರಾಟವಾಗಿದ್ದಾರೆ.

ಗುಜ್ಜರ ಮದುವೆ ನೆಪದಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ದಿಲ್ಲಿಯತ್ತ ಹೆಣ್ಣು ಮಕ್ಕಳನ್ನು ಸಾಗಿಸುವ ಜಾಲ ತೆರೆಮರೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದು, ಬಡ ಹೆಣ್ಣು ಮಕ್ಕಳ ತಂದೆ- ತಾಯಿಯನ್ನು ಪುಸಲಾಯಿಸಿ ಅವರಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಹೆಣ್ಣು ಮಕ್ಕಳನ್ನು ಸಾಗಾಟ ಮಾಡಲಾಗುತ್ತಿದೆ.

ಮೂರು ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹೆಣ್ಣು ಮಕ್ಕಳ ಮಾರಾಟ ಪ್ರಕರಣವನ್ನು ಭೇದಿಸಿದ್ದ ಪೊಲೀಸರಿಗೆ ಈ ಜಾಲದ ಕರಾಳ ಮುಖದರ್ಶನವಾಗಿತ್ತು. ಅನಂತರ ಕಡಿಮೆಯಾಗಿದ್ದ ಹೆಣ್ಣು ಮಕ್ಕಳ ಮಾರಾಟ ಜಾಲ ಈಗ ಮತ್ತೆ ಗರಿಗೆದರಿದೆ. ಧಾರವಾಡ ಮೂಲದ ಸಾಧನಾ ಸ್ವಯಂಸೇವಾ ಸಂಸ್ಥೆ ಈ ಜಾಲಕ್ಕೆ ಸಿಲುಕಿದ ಹೆಣ್ಣು ಮಕ್ಕಳ ಸಮೀಕ್ಷೆ ನಡೆಸಿದೆ.

ಯಾರಿಗೆ ಗಾಳ
ಹೆಣ್ಣು ಮಕ್ಕಳ ಮಾರಾಟ ಜಾಲದ ಪ್ರಕರಣಗಳು ಪೊಲೀಸರ ಸಮೀಪವೂ ಸುಳಿಯದಂತೆ ನೋಡಿಕೊಳ್ಳಲು ಕೆಲವು ರಾಜಕೀಯ ಪುಢಾರಿಗಳಿಗೆ ಹಫ್ತಾ ನೀಡಲಾಗುತ್ತಿದೆ. ಹಳ್ಳಿಗಳಲ್ಲಿರುವ ಕಡು ಬಡತನ, ಕುಟುಂಬ ಸಮಸ್ಯೆ, ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾಗಿ ಬದುಕುವ ಹೆಣ್ಣು ಮಕ್ಕಳನ್ನು ಆಯಾ ಗ್ರಾಮಗಳಲ್ಲಿನ ಸಂಬಂಧಿಗಳ ಮುಖಾಂತರ ಏಜೆಂಟರು ಪತ್ತೆ ಮಾಡುತ್ತಿದ್ದಾರೆ. ಪತ್ತೆ ಯಾದವರನ್ನು ಪೊಲೀಸರಿಗೆ ಸಂಶಯ ಬಾರದಂತೆ ನಗರಗಳಲ್ಲಿನ ದೇವಸ್ಥಾನಗಳಿಗೆ ಕರೆಯಿಸಿಕೊಂಡು ಅಲ್ಲಿ ಮಾತುಕತೆ ಮಾಡಿಸಿ, ಹೆಣ್ಣುಮಕ್ಕಳ ಪೋಷಕರಿಗೆ ಹಣ ನೀಡಿ ಅವರನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ.

ಸಾಕ್ಷಿ ಕೊರತೆ -ಮುಂಬಯಿ ನಂಟು
ಹೆಣ್ಣು ಮಕ್ಕಳ ಮಾರಾಟ ಜಾಲದಲ್ಲಿ ಗುಜ್ಜರ ಮದುವೆ ಒಂದು ಅಸ್ತ್ರವಾಗಿ ಪರಿಣಮಿಸಿದೆ. ಹೆಣ್ಣು ಮಕ್ಕಳನ್ನು ಪತ್ತೆ ಮಾಡಿ ಮದುವೆ ಮಾಡಿಸಿಕೊಟ್ಟವರು 50 ಸಾವಿರ ರೂ.ಗಳಿಂದ ಎರಡು ಲಕ್ಷ ರೂ.ವರೆಗೂ ಕಮಿಷನ್‌ ಪಡೆಯುತ್ತಿದ್ದಾರೆ. ಏಜೆಂಟರಿಗೆ ಮುಂಬಯಿಯಲ್ಲಿ ಅನೈತಿಕ ಅಡ್ಡೆಗಳನ್ನು ನಡೆಸುವವರ ಸಂಪರ್ಕವಿದೆ. ಕಲಘಟಗಿ ಮತ್ತು ಮುಂಡ ಗೋಡದಲ್ಲಿನ ಬಡ ಹೆಣ್ಣು ಮಕ್ಕಳೇ ಅತೀ ಹೆಚ್ಚು ಸಂಖ್ಯೆಯಲ್ಲಿ ಮುಂಬಯಿ ರೈಲು ಹತ್ತಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಸ್ವತಃ ಹೆಣ್ಣು ಮಕ್ಕಳ ತಂದೆ-ತಾಯಿ ಮತ್ತು ಊರಿನ ಹಿರಿಯರೇ ಭಾಗಿಯಾಗಿದ್ದರಿಂದ ಅವರನ್ನು ಸಾಕ್ಷಿ ಮಾಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಲಿವಿಂಗ್‌ ಟುಗೆದರ್‌ ಪರಿಕಲ್ಪನೆಯಲ್ಲಿ ಸಜ್ಜುಗೊಳಿಸಿ ಕಾನೂನಿನಿಂದ ರಕ್ಷಣೆ ನೀಡಿ ಈ ಅನೈತಿಕ ದಂಧೆಗೆ ನೂಕಲಾಗುತ್ತಿದೆ.

ಎಲ್ಲೆಲ್ಲಿ ಮಾರಾಟ?
ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ನರೇಂದ್ರ, ಕೋಟೂರು, ಬೇಲೂರು, ಲಾಳಗಟ್ಟಿ, ಹೊಲ್ತಿಕೋಟಿ; ಕಲಘಟಗಿ ತಾಲೂಕಿನ ಮಡಕಿ ಹೊನ್ನಳ್ಳಿ, ತಂಬೂರು, ದೇವಿಕೊಪ್ಪ , ಹುಬ್ಬಳ್ಳಿ ತಾಲೂಕಿನ ಕೊಟಗುಣಸಿ, ಅದರಗುಂಚಿ; ಕುಂದಗೋಳ ತಾಲೂಕಿನ ಸಂಶಿ, ಹಿರೇನರ್ತಿ; ನವಲಗುಂದ ತಾಲೂಕಿನ ಯಮನೂರು, ಇಬ್ರಾಹಿಂಪೂರ, ಮಜ್ಜಿಗುಡ್ಡ ಈ ಗ್ರಾಮಗಳಲ್ಲಿ ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಯುವತಿಯರನ್ನು ಗುಜ್ಜರ ಮದುವೆ ರೂಪದಲ್ಲಿ ಮಾರಾಟ ಮಾಡಲಾಗಿದೆ.

ನಮ್ಮ ಅಪ್ಪ ಈಗಾಗಲೇ ಇಬ್ಬರು ಅಕ್ಕಂದಿರನ್ನು ಮಾರಾಟ ಮಾಡಿ ಈಗ ನನ್ನ ಮಾರಾಟಕ್ಕೂ ಸಜ್ಜಾಗಿದ್ದಾನೆ. ಆದರೆ ದೇವರ ದಯೆಯಿಂದ ನಾನು ಪಾರಾಗಿದ್ದೇನೆ.
– ಸವಿತಾ (ಹೆಸರು ಬದಲಿಸಿದೆ) ಚಿಕ್ಕಮಲ್ಲಿಗವಾಡ ಗ್ರಾಮ

ಧಾರವಾಡ ಮಾತ್ರವಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ಈ ಜಾಲ ಹರಡಿಕೊಂಡಿದೆ. ಈ ಬಗ್ಗೆ ಈಗಾಗಲೇ ಕ್ರಮ ವಹಿಸಿದ್ದೇನೆ. ಬಡ ಹೆಣ್ಣು ಮಕ್ಕಳನ್ನು ತಂದೆ- ತಾಯಿ ಮಾರಾಟ ಮಾಡಿದ್ದು ಗೊತ್ತಾದರೆ ಅವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುತ್ತೇನೆ.
-ವರ್ತಿಕಾ ಕಟಿಯಾರ್‌, ಎಸ್ಪಿ-ಧಾರವಾಡ

Comments are closed.