ಕರ್ನಾಟಕ

ಪೌರತ್ವ ತಿದ್ದುಪಡಿ ಮಸೂದೆ; ರಾಜ್ಯದ ಮಸೀದಿಗಳಲ್ಲಿ ಮುಸ್ಲಿಮರ ದಾಖಲಾತಿ ಪರಿಶೀಲನೆ

Pinterest LinkedIn Tumblr


ಬೆಂಗಳೂರು(ಡಿ.11): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾದ ಪೌರತ್ವ ತಿದ್ದುಪಡಿ ಮಸೂದೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಮುಸ್ಲಿಮರು ಬಂದ್​ಗೆ ಕರೆ ನೀಡಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ಪೌರತ್ವ ತಿದ್ದುಪಡಿ ಮಸೂದೆಗೆ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಅದೇ ಸಮುದಾಯದಲ್ಲಿನ ಕೆಲವು ನಾಯಕರು ಮಸೀದಿಗಳಲ್ಲಿ ಮುಸ್ಲಿಮರ ದಾಖಲಾತಿಗಳನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಕಳೆದ ಎರಡು ವಾರಗಳಿಂದ ಪ್ರತಿ ಶುಕ್ರವಾರ ಪ್ರಾರ್ಥನೆ ಜತೆಗೆ ಸಮುದಾಯದವರ ಪೌರತ್ವ ದಾಖಲೆ ಮರುಪರಿಶೀಲನೆ ಮಾಡುತ್ತಿದ್ದಾರೆ. ಪ್ರಾರ್ಥನೆಗೆ ಬರುವಾಗ ಕಡ್ಡಾಯ ದಾಖಲೆ ತರಲೇಬೇಕೆಂದು ಸಮುದಾಯದ ಮುಖಂಡರಿಗೆ ಸೂಚಿಸಿದ್ಧಾರೆ. ಸಹಜವಾಗಿ ಸಣ್ಣಪುಟ್ಟ ತಪ್ಪುಗಳಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಾಖಲೆ ಮರುಪರಿಶೀಲನೆಗೆ ಮುಂದಾಗಿದ್ದೇವೆ ಎಂದು ನ್ಯೂಸ್​​​-18ಗೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ವಿರೋಧದ ನಡುವೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡಿದ್ದಾರೆ. ದೇಶಾದ್ಯಂತ ಜಾರಿಗೊಳಿಸುವುದಾಗಿ ಅಮಿತ್​ ಶಾ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ನೀವು ಮಸೀದಿಯಲ್ಲಿ ನಮ್ಮ ಸಮುದಾಯದವರ ದಾಖಲೆ ಮರುಪರಿಶೀಲಿಸಿದರೆ ಸಾಲದು, ಹೋರಾಟವೂ ಮಾಡಬೇಕೆಂದು ಪ್ರಮುಖ ಮುಸ್ಲಿಂ ಮುಖಂಡರು ಎಚ್ಚರಿಸಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ಕೆಲವು ಮುಸ್ಲಿಂ ನಾಯಕರು ಮುನ್ನೆಚ್ಚರಿಕಾ ಕ್ರಮವಾಗಿ ಸಮುದಾಯದವರ ಹಿತಕ್ಕಾಗಿ ಹೀಗೆ ದಾಖಲೆ ಮುರುಪರಿಶೀಲನೆ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ಉತ್ತರಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಸ್ಲಿಂ ಸಮುದಾಯದ ಎಲ್ಲಾ ಮುಖಂಡರು ಕಡ್ಡಾಯವಾಗಿ ತಮ್ಮ ಪೌರತ್ವ ದಾಖಲೆಗಳನ್ನು ಮರುಪರಿಶೀಲಿಸಬೇಕೆಂದು ಪ್ರಮುಖ ನಾಯಕರು ಅಧಿಸೂಚನೆ ಹೊರಡಿಸಿದ್ದಾರೆ. ಮುಂದೆ ಯಾವುದೇ ಸಮಸ್ಯೆ ಸಂಭವಿಸಬಾರದು ಎಂಬ ಕಾರಣಕ್ಕೆ ಹೀಗೆ ದಾಖಲಾತಿ ಪರಿಶೀಲನೆ ನಿರ್ಧಾರ ಕೈಗೊಂಡಿದ್ದಾರೆ.

ನಮಗೇ ಎನ್​​ಆರ್​​ಸಿಯೊಂದಿಗೆ ಯಾವುದೇ ಸಮಸ್ಯೆಯಿಲ್ಲ. ಏಕೆಂದರೆ, ನಾವು ಭಾರತೀಯರು ಎಂದು ಮೊಹದ್​​​ ಮಕ್ಸೂದ್​​​​​ ಇಮ್ರಾನ್​​ ಎಂದ ಧರ್ಮ ಗುರು ನ್ಯೂಸ್​​-18ಗೆ ಹೇಳಿಕೊಂಡಿದ್ದಾರೆ. ಮೊಹದ್​​​​​ ಮಕ್ಸೂದ್​​​ ಇಮ್ರಾನ್​​​​​ ಬೆಂಗಳೂರಿನ ಜಾಮೀಯ ಮಸೀದಿಯ ಪ್ರಮುಖ ಧರ್ಮ ಗುರು ಆಗಿದ್ಧಾರೆ.

ಪೌರತ್ವ ದಾಖಲೆಗಳಲ್ಲಿ ಯಾವುದಾದರೂ ಸಣ್ಣಪುಟ್ಟ ತಪ್ಪಿರಬಹುದು. ಹಾಗಾಗಿ ಮತ್ತೊಮ್ಮೆ ಪುನರ್​​ ಪರಿಶೀಲನೆ ಮಾಡುವಂತೆ ನಮ್ಮ ಸಮುದಾಯದವರಿಗೆ ಹೇಳಿದ್ದೇವೆ. ಪ್ರಮುಖವಾಗಿ ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಮರ ದಾಖಲಾತಿಗಳಲ್ಲಿ ಸಣ್ಣಪುಟ್ಟ ತಪ್ಪುಗಳಿಗವೆ. ಆಧರ್​​, ಪ್ಯಾನ್​​ ಮತ್ತು ವೋಟರ್​​ ಐಡಿ ಕಾರ್ಡ್​ನಲ್ಲಿ ಬೇರೆ ಬೇರೆಯದ್ದೇ ಹೆಸರುಗಳಿವೆ ಎಂದರು ಇಮ್ರಾನ್​​​.

ಸೋಮವಾರ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಭಾರತದ ಯಾವ ಮುಸ್ಲಿಂ ವ್ಯಕ್ತಿಯೂ ಭಯಪಡಬೇಕಾದದ್ದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದರು. ಈ ಮಸೂದೆ ಬಗ್ಗೆ ಯಾರಾದರೂ ಬೆದರಿಸಲು ಯತ್ನಿಸಿದರೆ, ಭಾರತದ ಮುಸ್ಲಿಮರು ಕಿವಿಗೊಡಬೇಡಿ. ನಮ್ಮ ಸರ್ಕಾರವು ಸಂವಿಧಾನಕ್ಕೆ ಬದ್ಧವಾಗಿಯೇ ಕೆಲಸ ಮಾಡುತ್ತದೆ. ಅಲ್ಪಸಂಖ್ಯಾತರಿಗೆ ಪೂರ್ತಿ ರಕ್ಷಣೆ ದೊರೆಯಲಿದೆ’ ಎಂದು ಭರವಸೆ ನೀಡಿದ್ದರು.

ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ವ್ಯವಸ್ಥೆ ಹೊಂದಿರುವ ಏಕೈಕ ರಾಜ್ಯ ಅಸ್ಸಾಂ. ರಾಜ್ಯದಲ್ಲಿರುವ ನೈಜ ಅಸ್ಸಾಂ ಪ್ರಜೆಗಳ ನೋಂದಣಿಯೇ ಎನ್​ಆರ್​ಸಿ ಕರಡು. 1951ರ ಗಣತಿಯಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿತ್ತು. ನಾಗರಿಕರ ಹೆಸರು, ಕುಟುಂಬದವರ ಸಂಖ್ಯೆ, ಅವರ ಆಸ್ತಿ-ಪಾಸ್ತಿ ಮತ್ತಿತರ ದಾಖಲೆಗಳನ್ನು ಕರಡು ಒಳಗೊಂಡಿರುತ್ತದೆ.

ಅಕ್ರಮ ವಲಸಿಗರನ್ನು ಗುರುತಿಸಲು ಪ್ರತ್ಯೇಕ ರಿಜಿಸ್ಟ್ರಿ ರಚಿಸಲು ಸರ್ಕಾರ ನಿರ್ಧರಿಸಿತ್ತು. 1971ಕ್ಕೂ ಮುನ್ನ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದವರನ್ನು ಸ್ಥಳೀಯರೆಂದು ಗುರುತಿಸಿ ಪೌರತ್ವ ನೀಡಲು ಒಪ್ಪಲಾಗಿತ್ತು. ಇದಕ್ಕಾಗಿ ಒಂದೋ ಅಲ್ಲಿನ ನಾಗರಿಕರ ಹೆಸರು 1951ರ ಎನ್‌ಆರ್‌ಸಿ ಪಟ್ಟಿಯಲ್ಲಿರಬೇಕು ಅಥವಾ 1971ರ ಮಾರ್ಚ್ 24ರ ಒಳಗಾಗಿ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ನೋಂದಣಿಯಾಗಿರಬೇಕು. ಇಲ್ಲವಾದರೆ ಭೂಹಿಡುವಳಿ ದಾಖಲೆ, ಪಾಸ್‌ಪೋರ್ಟ್, ಶಾಶ್ವತ ವಾಸ್ತವ್ಯ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೊಂದನ್ನು ಒದಗಿಸಿ ತಾವು ಅಕ್ರಮ ವಲಸಿಗರಲ್ಲ ಎಂದು ಸಾಬೀತು ಮಾಡಬೇಕಿತ್ತು.

ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿಯಿಂದ ಸುಮಾರು 19 ಲಕ್ಷ ಜನರನ್ನು ಕೈಬಿಡಲಾಗಿದೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿತ್ತು. ಕೈಬಿಡಲಾದ ಪಟ್ಟಿಯಲ್ಲಿ ಲಕ್ಷಾಂತರ ಹಿಂದೂಗಳು ಇದ್ದರು ಎಂದು ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೇ ಆರೋಪಿಸಿದ್ದರು. ಹಾಗಾಗಿ ಕೇಂದ್ರ ಸರ್ಕಾರವೂ ಮತ್ತೊಮ್ಮೆ ರಾಷ್ಟ್ರೀಯ ನಾಗರಿಕ ನೋಂದಣಿ ಕಾರ್ಯ ಶುರು ಮಾಡಲು ನಿರ್ಧರಿಸಿದೆ.‘

ಕರ್ನಾಟಕದ ಎಲ್ಲಾ ಮಸೀದಿಗಳಿಗೆ ಪ್ರಾರ್ಥನೆಗಾಗಿ ಬರುವ ಮುಸ್ಲಿಂ ಮುಖಂಡರಿಗೆ ತಮ್ಮ ದಾಖಲಾತಿ ಸಮೇತ ಬರುವಂತೆ ಹೇಳಿದ್ದೆವು. ನಾವೇ ಆಧಾರ್​​, ಪ್ಯಾನ್​​ ಮತ್ತು ವೋಟರ್​​ ಕಾರ್ಡ್​ನಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ತಿದ್ದುಪಡಿ ಮಾಡುತ್ತಿದ್ದೇವೆ. ಶುಕ್ರವಾರದ ವೇಳೆ ಸಾಕಷ್ಟು ಮುಸ್ಲಿಮರು ಬಂದು ತಮ್ಮ ಪೌರತ್ವ ದಾಖಲೆಗಳನ್ನು ಪರಿಶೀಲಿಸಿಕೊಂಡು ಹೋಗುತ್ತಿದ್ಧಾರೆ ಎಂದರು ಇಮ್ರಾನ್.

ಕಳೆದ ಎರಡು ವಾರಗಳಲ್ಲಿ ಸುಮಾರು 700-800 ಜನ ಸಹಾಯ ಕೇಳಿಕೊಂಡು ಬಂದಿದ್ದರು. ಇವರ ದಾಖಲೆಗಳಲ್ಲಿ ಬಹುತೇಕರದ್ದು ಹೆಸರು ತಪ್ಪಾಗಿದೆ. ಉದಾಹರಣೆಗೆ ಒಂದರಲ್ಲಿ Mohd ಎಂದಿದ್ದರೆ ಇನ್ನೊಂದರಲ್ಲಿ Mohammad ಎಂದಿರುತ್ತದೆ. ಇನ್ನು ಕೆಲವರದ್ದು ಹುಟ್ಟಿದ ದಿನಾಂಕವೇ ಇರುವುದಿಲ್ಲ. ಇದಕ್ಕೆಲ್ಲ ಕಾರಣ ನಮ್ಮ ಸಮುದಾಯದಲ್ಲಿನ ಶಿಕ್ಷಣದ ಕೊರತೆ. ಹಾಗಾಗಿ ನಾವು ಈ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಇದಕ್ಕಾಗಿ ಸಮಸ್ಯೆಗಳನ್ನು ಗುರುತಿಸಲು ಫಾರ್ಮ್​​ ನೀಡುತ್ತಿದ್ದೇವೆ. ಈ ಮೂಲಕ ಸಮುದಾಯದವರ ಸಮಸ್ಯೆ ಸರಿಪಡಿಸಲು ಯತ್ನಿಸುತ್ತಿದ್ದೇವೆ ಎಂದು ಇಮ್ರಾನ್​​ ಹೇಳಿದರು.

ನಾವು ಸಾದ್ಯವಾದಷ್ಟು ಆನ್​​ಲೈನಲ್ಲೇ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದೇವೆ. ಅವರಿಗೆ ಕೂಡಲೇ ಅಕ್​​ನಾಲೆಜ್​​ಮೆಂಟ್ ನೀಡುತ್ತಿದ್ದೇವೆ. ನಮಗೆ ಸಿಕ್ಕ ಕ್ಲಾಸಿಕ್​​ ಕೇಸುಗಳ ಪೈಕಿ ನಿಜಾಮುದ್ದೀನ್​(Nijamuddin) ಎಂಬುದು ಒಂದು ಹೆಸರು. ಆತನ ನಿಜವಾದ ಹೆಸರು Nizamuddin. ಆತ ಕನ್ನಡ ಮಾಧ್ಯಮದಲ್ಲಿ ಓದಿದ ಕಾರಣ Nijamuddin ಎಂದು ಬರೆದಿದ್ಧಾರೆ. ಇತಂಹ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೇವೆ ಎಂದರು ವಾಸೀಮ್​​ ಅಹ್ಮದ್​​ ಎಂಬುವರು.

Comments are closed.