ಕುಂದಾಪುರ: ಕರಾವಳಿಯ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಸಿದ್ಧ ಕೊಡಿ ಹಬ್ಬ ಡಿ. ೧೨ರಂದು (ಗುರುವಾರ) ನಡೆಯಲಿದ್ದು ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದೆ.

ನಾಳೆ ಸಂಭ್ರಮದ ಜಾತ್ರೆ…
ಧಾರ್ಮಿಕ ಕಾರ್ಯಕ್ರಮಗಳು ಡಿ. 5 ರಿಂದ ಆರಂಭಗೊಂಡಿದ್ದು ಡಿ.12 ಗುರುವಾರ ಪೂರ್ವಾಹ್ನ 10.55ರ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ಜರುಗಲಿದೆ. ಡಿ. 12 ಶುಕ್ರವಾರ ಚೂರ್ಣೋತ್ಸವ, ಅವಭೃತ ಸ್ನಾನ ರಾತ್ರ್ರಿ ಓಕುಳಿ ಸೇವೆ ನಡೆಯಲಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ರಾವ್, ತಂತ್ರಿ ಪ್ರಸನ್ನ ಕುಮಾರ್ ಐತಾಳ್, ಅರ್ಚಕರು, ಸಿಬ್ಬಂದಿಗಳು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಎನ್. ರಾಘವೇಂದ್ರ ರಾವ್ ನೇರಂಬಳ್ಳಿ, ವಿ. ರಾಜೀವ್ ಶೆಟ್ಟಿ, ಶಂಕರ್ ಚಾತ್ರಬೆಟ್ಟು, ಅಶೋಕ್ ಪೂಜಾರಿ ಬೀಜಾಡಿ, ಭಾರತಿ ಆನಂದ ದೇವಾಡಿಗ, ಸುಶೀಲ ಶೇಟ್, ಜ್ಯೋತಿ ಎಸ್ ನಾಯ್ಕ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಒಗ್ಗೂಡುವಿಕೆಯಲ್ಲಿ ಸಕಲ ಸಿದ್ಧತೆ ನಡೆದಿದೆ.

(ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ಸದಸ್ಯರು ಫ್ಲಾಸ್ಟಿಕ್ ಬಳಕೆ ಮಾಡಬಾರದೆಂದು ಕರಪತ್ರ ಹಂಚಿದರು)
ಪ್ಲಾಸ್ಟಿಕ್ ಬಳಕೆ ನಿಷೇಧ..
ಜಿಲ್ಲೆಯಲ್ಲಿಯೇ ಅತೋ ದೊಡ್ಡ ಹಬ್ಬ ಅಂದರೆ ಕೊಡಿ ಹಬ್ಬ. ವಾರಗಳ ಕಾಲ ನಡೆಯುವ ಈ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಘೊಳ್ಳುತ್ತಾರೆ. ಈ ಬಾರಿ ಕೊಡಿ ಹಬ್ಬವನ್ನು ಫ್ಲಾಸ್ಟಿಕ್ ಮುಕ್ತವನ್ನಾಗಿಸಿ ಮಾದರಿ ಹಬ್ಬವನ್ನಾಗಿ ಮಾಡಲು ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದ್ದು ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ಸದಸ್ಯರು ಇದಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ಫ್ಲಾಸ್ಟಿಕ್ ಮುಕ್ತ ಹಬ್ಬಕ್ಕೆ ಪೂರಕವಾಗಿ ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ಸದಸ್ಯರು ಕಾರ್ಯೋನ್ಮುಖರಾಗಿದ್ದಾರೆ. ಮಂಗಳವಾರ ಸಂಜೆಯಿಂದ ರಾತ್ರಿಯವರೆಗೂ ಹಬ್ಬದ ಅಂಗವಾಗಿ ಬಂದ ಅಂಗಡಿಗಳ ಸಂಬಂದಪಟ್ಟವರಿಗೆ ಎಚ್ಚರಿಕೆ ಕರಪತ್ರವನ್ನು ನೀಡಿ ತಮ್ಮ ಅಭಿಯಾನಕ್ಕೆ ಸಹಕಾರ ನೀಡಲು ಕೋರಿದ್ದಾರೆ.
ಆದರೂ ಫ್ಲಾಸ್ಟಿಕ್ ಬಳಕೆ ನಿಂತಿಲ್ಲ..
ಭಕ್ತಾದಿಗಳು ಒಂದೊಮ್ಮೆ ಪ್ಲಾಸ್ಟಿಕ್ ಚೀಲದಲ್ಲಿ ಹಣ್ಣು ಕಾಯಿ ಸಾಮಾಗ್ರಿಗಳನ್ನು ತಂದಲ್ಲಿ ಪ್ರತ್ಯೇಕ ಬಟ್ಟೆಯ ಚೀಲವನ್ನು ಕೊಡುವ ವ್ಯವಸ್ಥೆಯನ್ನು ಸ್ವಯಂ ಸೇವಕರ ಮೂಲಕ ದೇವಸ್ಥಾನ ಮಾಡಿಕೊಂಡಿದೆ. ಆದರೆ ವ್ಯಾಪಾರಸ್ಥರು ಕೊಡುವ ಫ್ಲಾಸ್ಟಿಕ್ ಚೀಲಗಳಿಗೆ ಸಂಬಂದಪಟ್ಟ ಕೋಟೆಶ್ವರ ಗ್ರಾಮಪಂಚಾಯತ್ ಕಡಿವಾಣ ಹಾಕುವ ಪ್ರಯತ್ನ ಅಷ್ಟಾಗಿ ಮಾಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಫ್ಲಾಸ್ಟಿಕ್ ಚೀಲಗಳನ್ನು ಗ್ರಾಹಕರಿಗೆ ನೀಡುವ ವ್ಯಾಪಾರಸ್ಥರ ಬಗ್ಗೆ ಗ್ರಾ.ಪಂ ಯಾವುದೇ ಮ್ರಧು ಧೋರಣೆ ತಳೆಯದೇ ಸ್ವಚ್ಚ ಕೊಡಿಹಬ್ಬಕ್ಕೆ ಸಾಥ್ ನೀಡಬೇಕಿದೆ.

ಹಬ್ಬದ ಸಲುವಾಗಿ ಪೊಲೀಸ್ ಬಂದೋಬಸ್ತ್..
ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಜಮಾಯಿಸಲಿದ್ದು ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಈಗಾಗಲೇ ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ಕೋಟೇಶ್ವರಕ್ಕೆ ಆಗಮಿಸಿ ಬಂದೋಬಸ್ತ್ ರೂಪುರೇಷೆ ವೀಕ್ಷಿಸಿದ್ದಾರೆ. ಕುಂದಾಪುರ ಸಿಪಿಐ ಮಂಜಪ್ಪ ಡಿಆರ್., ಪಿಎಸ್ಐ ಹರೀಶ್ ಆರ್. ನಾಯ್ಕ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇನ್ನು ಹಬ್ಬದ ಸಲುವಾಗಿ ಓರ್ವ ಡಿವೈಎಸ್ಪಿ, ನಾಲ್ವರು ಸಿಪಿಐ, 10 ಪಿಎಸ್ಐಗಳು, ಒಬ್ಬರು ಪ್ರೊಬೇಷನರಿ ಪಿಎಸ್ಐ, 12 ಎಎಸ್ಐ, 104 ಮಂದಿ ಹೆಡ್ ಕಾನ್ಸ್ ಟೇಬಲ್ ಹಾಗೂ ಕಾನ್ಸ್ ಟೇಬಲ್, 29 ಮಂದಿ ಮಹಿಳಾ ಪೊಲೀಸರು, 67 ಹೋಂ ಗಾರ್ಡ್ ಸಿಬ್ಬಂದಿಗಳ ಸಹಿತ ಒಟ್ಟು 228 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಒಂದು ಕೆ.ಎಸ್.ಆರ್.ಪಿ. ತುಕಡಿ, ಎರಡು ಡಿಎಆರ್ ವಾಹನವನ್ನು ಇರಿಸಲಾಗಿದೆ. ಟ್ರಾಫಿಕ್, ಜನದಟ್ಟಣೆ ಸಹಿತ ಆಯಕಟ್ಟಿನ ಸ್ಥಳಗಳಲ್ಲಿ 30ಕ್ಕೂ ಅಧಿಕ ಸಿಸಿ ಟಿವಿಗಳನ್ನು ಅಳವಡಿಸಿದ್ದು ಅದರ ಲೈವ್ ವೀಕ್ಷಣೆ ನಡೆಯಲಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.