ರಾಷ್ಟ್ರೀಯ

ಪೌರತ್ವ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು; ವ್ಯಾಪಕ ಆಕ್ರೋಶ

Pinterest LinkedIn Tumblr

ಗುವಾಹತಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿ ಅನುಮೋದನೆಗೊಂಡ ಬೆನ್ನಲ್ಲೇ ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಬೆಳಗ್ಗೆ 5ಕ್ಕೆ ಪ್ರಾರಂಭವಾದ ಬಂದ್ ಸಂಜೆ 4ರವರೆಗೆ ನಡೆಯುತ್ತಿದೆ. ಈಶಾನ್ಯ ಪ್ರದೇಶದ ಅಸ್ಸಾಮ್, ಅರುಣಾಚಲ, ಮೇಘಾಲಯ, ಮಿಜೋರಾಮ್ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪ್ರತಿಭಟನಾಕಾರರು ಅಲ್ಲಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಪೌರತ್ವ ಮಸೂದೆಯಲ್ಲಿ ಇನ್ನರ್ ಲೈನ್ ಪರ್ಮಿಟ್, ಅಂದರೆ ಒಳ ಪ್ರದೇಶ ಭೇಟಿಗೆ ಅವಕಾಶ ಕಲ್ಪಿಸುವ ಅಂಶವನ್ನು ಸೇರಿಸಲಾಗಿದೆ ಎಂಬುದು ಈಶಾನ್ಯ ರಾಜ್ಯಗಳ ಪ್ರಮುಖ ಆಕ್ಷೇಪವಾಗಿದೆ. ಈ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಜಾರಿಗೆ ಬಂದರೆ ಈಶಾನ್ಯದ ಸೂಕ್ಷ್ಮ ಸಾಂಸ್ಕೃತಿಕ ಮತ್ತು ಪರಿಸರ ವಾತಾವರಣಕ್ಕೆ ಧಕ್ಕೆಯಾಗುತ್ತದೆ ಎಂಬುದು ಇಲ್ಲಿನವರ ಆತಂಕವಾಗಿದೆ. ಅದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ, ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಗೆ ಅನುವು ಮಾಡಿಕೊಡುವುದಾಗಿ ಹೇಳಿದ್ದು ಇಲ್ಲಿನವರನ್ನು ರೊಚ್ಚಿಗೆಬ್ಬಿಸಿದೆ.

ಪೌರತ್ವ ಮಸೂದೆ ವಿರೋಧಿಸಲೆಂದು ಜನ್ಮ ತಳೆದಿರುವ MANPAK ಎಂಬ ಸಂಘಟನೆಯು ಮಣಿಪುರದಲ್ಲಿ ಇವತ್ತಿನ ಪ್ರತಿಭಟನೆಯ ನೇತೃತ್ವ ವಹಿಸಿದೆ. ಬೇರೆ ರಾಜ್ಯಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳುನಡೆಯುತ್ತಿವೆ. ಕಾಂಗ್ರೆಸ್, ಎಐಯುಡಿಎಫ್, ಎಎಎಸ್​ಯು, ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ, ಎಎಪಿಎಸ್​ಯು, ಖಾಸಿ ವಿದ್ಯಾರ್ಥಿ ಒಕ್ಕೂಟ, ನಾಗಾ ವಿದ್ಯಾರ್ಥಿ ಒಕ್ಕೂಟಗಳು ಹಾಗೂ ಹಲವು ಎಡಪಂಥೀಯ ಸಂಘಟನೆಗಳು ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಿವೆ.

ಗುವಾಹತಿಯಲ್ಲಿ ಪ್ರತಿಭಟನೆ ತೀವ್ರ ಮಟ್ಟದಲ್ಲಿದೆ. ಪ್ರತಿಭಟನಾಕಾರರು ಹಲವು ಕಡೆ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರು ಬೆಳಗ್ಗೆ 5ಗಂಟೆಗೆ ಟಾರ್ಚ್ ಲೈಟ್ ಮೆರವಣಿಗೆ ನಡೆಸಿದ್ದಾರೆ.

Comments are closed.