ಮಂಗಳೂರು, ಡಿಸೆಂಬರ್.06: ಬಂಟರ ಯಾನೆ ನಾಡವರ ಮಾತೃ ಸಂಘದ ಹಾಲಿ ಅಧಿಕಾರಾವಧಿ ಪೂರ್ಣಗೊಳಿಸಿರುವ ಮಾಲಾಡಿ ಅಜಿತ್ ಕುಮಾರ್ ರೈ ಎರಡು ಅವಧಿಗೆ ಅಧ್ಯಕ್ಷರಾಗಿದ್ದರು. ಈ ಬಾರಿ ಬದಲಾವಣೆ ಅಗತ್ಯವಿರುವುದರಿಂದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಅಜಿತ್ ಕುಮಾರ್ ರೈ ಅವರ ವಿರುದ್ಧ ಕಾರ್ಮಿಕ ಮುಖಂಡ ಸುರೇಶ್ಚಂದ್ರ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ ಎಂದು ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸಂಘದ ಮಾಜಿ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾಹಿತಿ ನೀಡಿದರು.
ಶುಕ್ರವಾರ ನಗರದ ಕುಡ್ಲ ಹೋಟೆಲಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಟರ ಸಂಘದ ವತಿಯಿಂದ ನಿರ್ಮಾಣವಾಗಬೇಕಾದ ಸಭಾಂಗಣದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸಂಘದ ಕುಂಠಿತಗೊಂಡಿರುವ ಎಲ್ಲ ಯೋಜನೆಗಳನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 38 ವರ್ಷಗಳಿಂದ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸ್ವಾತಂತ್ರ ಹೋರಾಟಗಾರ, ಮಾಜಿ ಶಾಸಕ ದಿ.ಎಂ.ಲೋಕಯ್ಯ ಶೆಟ್ಟಿಯವರ ಪುತ್ರರಾಗಿರುವ ಸುರೇಶ್ಚಂದ್ರ ಶೆಟ್ಟಿ ಎಂ., ಅವರು ಈ ಬಾರಿ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಇಳಿದಿದ್ದಾರೆ.
ವಿದ್ಯಾರ್ಥಿ ನಾಯಕನಾಗಿ, ರಾಷ್ಟಮಟ್ಟದ ಕಾರ್ಮಿಕ ಮುಖಂಡನಾಗಿ, ಉತ್ತಮ ಕ್ರೀಡಾ ಸಂಘಟಕರಾಗಿ ಸುರೇಶ್ಚಂದ್ರ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಬದಲಾವಣೆ ಅಗತ್ಯವಿದೆ. ಹಿಂದಿನ ಅಧ್ಯಕ್ಷರುಗಳಿಗೆ ಸಹಕಾರ ನೀಡಿದ ಮತದಾರರು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಸದಾನಂದ ಶೆಟ್ಟಿ ತಿಳಿಸಿದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ಅಮರನಾಥ ಶೆಟ್ಟಿ ಅವರು ಮಾತನಾಡಿ, ತಾನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷನಾಗಿದ್ದಾಗ ಕೆಲವೊಂದು ಯೋಜನೆಗಳಿಗೆ ಚಾಲನೆ ನೀಡಿದ್ದೆ. ಆದರೆ ನನ್ನ ಅವಧಿಯ ಬಳಿಕ ಸಂಘದ ಯಾವೂದೇ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಬದಲಾವಣೆ ಬಯಸಿದ್ದು, ಕಾರ್ಮಿಕ ಮುಖಂಡ ಸುರೇಶ್ಚಂದ್ರ ಶೆಟ್ಟಿಯವರನ್ನು ಎಲ್ಲರು ಬೆಂಬಲಿಸ ಬೇಕೇಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಾಥ ಹೆಗ್ಡೆ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ್ಚಂದ್ರ ಶೆಟ್ಟಿ, ಸಮಿತಿಯ ಇತರ ಸ್ಪರ್ಧಿಗಳಾದ ಪುಷ್ಪಾಕರ ಬಿ.ಶೆಟ್ಟಿ, ರಾಜಗೋಪಾಲ ರೈ, ಭಾಸ್ಕರ್ ರೈ ಕುಕ್ಕುವಳ್ಳಿ, ದೇವಿಚರಣ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.




Comments are closed.