ಮಂಗಳೂರು : ಕರ್ತವ್ಯದ ಮಧ್ಯೆಯೂ ಸಮಾಜ ಸೇವೆ ಸಲ್ಲಿಸುವ ಪೊಲೀಸರು ಹಾಗೂ ಟ್ರಾಫಿಕ್ ವಾರ್ಡನ್ಗಳಾಗಿ ಸೇವೆ ಸಲ್ಲಿಸುವವರಿಗೆ ಉದ್ಯಮಿಗಳಾದ ಮೈಕಲ್ ಡಿಸೋಜ ಮತ್ತು ಗಿಲ್ಬರ್ಟ್ ಡಿಸೋಜ ಸಹೋದರರಿಂದ ಸನ್ಮಾನ ಕಾರ್ಯಕ್ರಮ ನಗರದ ಪೊಲೀಸ್ ಆಯುಕ್ತಾಲಯದ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಅವರು ಮಾತನಾಡಿ, ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ಒತ್ತಡ ಹೆಚ್ಚುತ್ತಿವೆ. ಪೊಲೀಸ್ ಇಲಾಖೆಯು ಈ ಒತ್ತಡವನ್ನು ನಿಭಾಯಿಸಲು ಸಾಕಷ್ಟು ಶ್ರಮಿಸುತ್ತಿದೆ.ಈ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ಟ್ರಾಫಿಕ್ ವಾರ್ಡನ್ಗಳಾಗಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಟ್ರಾಫಿಕ್ ವಾರ್ಡನ್ ಜೋ ಗೊನ್ಸಾಲ್ವಿಸ್, ಕರ್ತವ್ಯದಲ್ಲಿರುವಾಗಲೇ ಸಮಾಜ ಸೇವೆಯ ಮೂಲಕ ಗಮನಸೆಳೆದ ಸಂಚಾರ ಪೊಲೀಸ್ ಠಾಣೆಯ ಕೃಷ್ಣಕುಮಾರ್, ಪುಟ್ಟರಾಮರನ್ನು ಸನ್ಮಾನಿಸಲಾಯಿತು. ಅಲ್ಲದೆ ಟ್ರಾಫಿಕ್ ವಾರ್ಡನ್ಗಳಾದ ಮೇರಿಸ್ ರೊಡ್ರಿಗಸ್, ಮೇರಿ ಪಿರೇರ, ಜೆ.ಮುಹಮ್ಮದ್ ಎ.ಕೆ., ರಿಚರ್ಡ್ ಡಿಸೋಜ, ಸುನೀಲ್ ಡಿಸೋಜ, ಬೂಬ, ಜೋಯೆಲ್ ಅಶೋಕ್ ಫೆರ್ನಾಂಡಿಸ್, ಡಿನತ್ ಡೇಸಾ, ರೋಶನ್ ಪತ್ರಾವೋ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಪಿ ಲಕ್ಷ್ಮಿಗಣೇಶ್ ಕೆ., ಸಹಾಯಕ ಆಯುಕ್ತರಾದ ಮಂಜುನಾಥ ಶೆಟ್ಟಿ, ಕೋದಂಡರಾಮ, ಇನ್ಸ್ಪೆಕ್ಟರ್ಗಳಾದ ಗೋಪಾಲಕೃಷ್ಣ ಭಟ್, ಗುರುದತ್ತ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.






Comments are closed.