ಮಂಗಳೂರು : ಕೆ.ಎಸ್.ಐ.ಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ) ಪಾರಂಪಾರಿಕ ಉತ್ಪನ್ನವಾದ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿಸೆಂಬರ್ 3 ರಿಂದ 8 ರವರೆಗೆ ಮಂಗಳೂರಿನ ಲಾಲ್ಬಾಗ್ ಸಮೀಪದ ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಕಟ್ಟಡದಲ್ಲಿ ಆರಂಭಿಸಲಾಗಿದೆ.
ಡಿ. 8ರವರೆಗೆ ನಡೆಯಲಿರುವ ಈ ಮಾರಾಟ ಹಾಗೂ ಪ್ರದರ್ಶನವನ್ನು ದ.ಕ.ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಉದ್ಘಾಟಿಸಿದರು.
ಇಲ್ಲಿ ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳು ಮಾತ್ರವಲ್ಲದೆ ಕೆ.ಎಸ್.ಐ.ಸಿ.ಯು ನಾಜೂಕಾದ ವಿನ್ಯಾಸದ ಸಂಗ್ರಹಿತ ಕ್ರೇಪ್ ಡಿ ಚೈನ್ ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು ,ಟೈ, ಸ್ಕಾರ್ಫ್, ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸಲಾಗುತ್ತದೆ. ನವನವೀನ ವಿವಾಹ ಸಂಗ್ರಹ ಸೀರೆಗಳನ್ನು ಪರಿಚಯಿಸಲಾಗಿದೆ ಹಾಗೂ ಕೆ.ಎಸ್.ಐ.ಸಿ.ಯು ತನ್ನ ಉತ್ಪನ್ನಗಳ ಮೇಲೆ ಶೇಕಡಾ 25%ರವರೆಗೆ ವಿಶೇಷ ರಿಯಾಯಿತಿಯನ್ನು ನೀಡುತ್ತದೆ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಎಸ್. ಬಾನುಪ್ರಕಾಶ್ ತಿಳಿಸಿದರು.
ಪ್ರದರ್ಶನದಲ್ಲಿ ಕನಿಷ್ಠ ಆರು ಸಾವಿರ ರೂ. ಮೌಲ್ಯದಿಂದ ಹಿಡಿದು 1.30 ಲಕ್ಷ ರೂ.ವರೆಗಿನ ಮೌಲ್ಯದ ಸೀರೆಗಳಿವೆ. ಮೈಸೂರು ಸಿಲ್ಕ್ಗೆ ಉಪಯೋಗಿಸುವ ರೇಷ್ಮೆ ಪರಿಶುದ್ಧವಾಗಿದ್ದು, ಜರಿಯು ಪರಿಶುದ್ಧ ಚಿನ್ನದಿಂದ ಕೂಡಿರುತ್ತದೆ. ಶೇ. 0.65 ಚಿನ್ನ ಹಾಗೂ ಶೇ. 65ರಷ್ಟು ಬೆಳ್ಳಿಯನ್ನು ಮೈಸೂರು ಸಿಲ್ಕ್ ಸೀರೆಗಳು ಒಳಗೊಂಡಿರುತ್ತದೆ. ಸಂಸ್ಥೆಯು ರೇಷ್ಮೆ ಗೂಡಿನಿಂದ ಹಿಡಿದು ನೂಲು ತೆಗೆಯುವುದು, ವಿವಿಧ ಮಾದರಿಯ ರೇಷ್ಮೆ ಸೀರೆಗಳನ್ನು ನೇಯ್ಗೆ ಮಾಡುವವರೆಗೂ ಒಂದೇ ಸೂರಿನಡಿ ಎಲ್ಲಾ ಉತ್ಪಾದನಾ ಹಂತಗಳನ್ನು ನಿರ್ವಹಿಸುವ ರಾಷ್ಟ್ರದ ಏಕೈಕ ಸರಕಾರಿ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.
ಪ್ರದರ್ಶನವು ಡಿ. 8ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ








Comments are closed.