
ಈಗ ಕೆಲವಾರು ದಿನಗಳಿಂದ ಫಾಸ್ಟ್ಯಾಗ್ (FASTag) ದೊಡ್ಡ ಸುದ್ದಿಯಾಗಿದೆ. 2014ರಲ್ಲೇ ಕೇಂದ್ರ ಸರ್ಕಾರ ಇದರ ಪ್ರಯೋಗ ಪ್ರಾರಂಭಿಸಿತ್ತು. ಕೆಲವೆಡೆ ನಡೆದ ಇದರ ಪರೀಕ್ಷೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈಗ ಇದರ ಬಳಕೆಯನ್ನು ಕಡ್ಡಾಯಗೊಳಿಸುತ್ತಿದೆ. ಕಾರು ಇತ್ಯಾದಿ ತ್ರಿಚಕ್ರ ಮೇಲ್ಪಟ್ಟ ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಳ್ಳುವುದು ಅಗತ್ಯವಿದೆ. ಕೇಂದ್ರ ಸರ್ಕಾರವು ಡಿ. 15ರವರೆಗೆ ಕಾಲಾವಕಾಶ ಕೊಟ್ಟಿದೆ.
ಏನಿದು FASTag?
ಫಾಸ್ಟ್ಯಾಗ್ ಎಂಬುದು ಬಹೂಪಯೋಗಿ ಹಣ ಪಾವತಿ ವ್ಯವಸ್ಥೆಯಾಗಿದೆ. ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (IHMCL) ಈ ಟ್ಯಾಗ್ಗಳನ್ನು ತಯಾರಿಸುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಹೊಂದಿರುವ ಸ್ಟಿಕರ್ ಇದಾಗಿದೆ. ಇದನ್ನು ಕಾರಿನ ವಿಂಡ್ ಶೀಲ್ಡ್ನಲ್ಲಿ ಅಂಟಿಸಬೇಕು. ಹೆದ್ದಾರಿಯಲ್ಲಿ ಟೋಲ್ ಮೂಲಕ ಸಾಗುವಾಗ ರೇಡಿಯೋ ಫ್ರೀಕ್ವೆನ್ಸಿಯಿಂದ ನಿಮ್ಮ ಕಾರಿನ ಗುರುತನ್ನು ಆಟೊಮ್ಯಾಟಿಕ್ ಆಗಿ ಪತ್ತೆ ಮಾಡಲಾಗುತ್ತದೆ. ಟೋಲ್ನಲ್ಲಿ ಹಣ ಪಾವತಿ ಮಾಡಲು ಕಾಯುವ ಅವಶ್ಯಕತೆ ಇರುವುದಿಲ್ಲ. ನಿಗದಿತ ದರವನ್ನು ಅದೇ ಮುರಿದುಕೊಳ್ಳುತ್ತದೆ. ಟೋಲ್ಗಳಲ್ಲಿ ಹತ್ತಾರು ನಿಮಿಷ ವ್ಯಯಿಸುವ ಪ್ರಮೇಯ ತಪ್ಪುತ್ತದೆ.
ಈ ಫಾಸ್ಟ್ಯಾಗನ್ನು ಟೋಲ್ನಲ್ಲಷ್ಟೇ ಅಲ್ಲ ವಿವಿಧೆಡೆ ಬಳಕೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಹಾಕಿಸಲು, ಪಾರ್ಕಿಂಗ್ನಲ್ಲಿ ಹಣ ಪಾವತಿ ಮಾಡಲು ಇತ್ಯಾದಿ ಕಾರ್ಯಗಳಿಗೆ ಫಾಸ್ಟ್ಯಾಗ್ ಬಳಕೆಯಾಗುವ ದಿನಗಳು ಸಮೀಪಿಸಿವೆ.
ಫಾಸ್ಟ್ಯಾಗ್ ಬಳಕೆ ಹೇಗೆ?
FASTag ಅನ್ನು ನಿರ್ದಿಷ್ಟ ಹಣ ಕೊಟ್ಟು ಖರೀದಿಸಬೇಕು. ಅದಕ್ಕೆ ವಾಹನದ ಆರ್ಸಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಫಾಸ್ಟ್ಯಾಗ್ ಖಾತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಯುಪಿಐ ಐಡಿಯನ್ನು ಲಿಂಕ್ ಮಾಡಬೇಕಾಗುತ್ತದೆ. ಇದರಿಂದ ಸ್ವಯಂಚಾಲಿತವಾಗಿ ಟೋಲ್ ದರ ಪಾವತಿಯಾಗಲು ಸಾಧ್ಯವಾಗುತ್ತದೆ.
ಹೆಚ್ಡಿಎಫ್ಸಿ ಹಾಗೂ ಇತರ ಬ್ಯಾಂಕ್ಗಳು ಫಾಸ್ಟ್ಯಾಗ್ ಸ್ಟಿಕರ್ಗಳನ್ನು ನೀಡುತ್ತಿವೆ. ಪೇಟಿಎಂ ಕೂಡ ಅಧಿಕೃತವಾಗಿ ಫಾಸ್ಟ್ಯಾಗ್ ಮಾರಾಟ ಮಾಡುತ್ತಿದೆ. ನೀವು ಆನ್ಲೈನ್ನಲ್ಲಿ ಫಾಸ್ಟ್ಯಾಗ್ ಖರೀದಿಸಿದರೆ ನಿಮ್ಮ ಮನೆಬಾಗಿಲಿಗೆ ಟ್ಯಾಗ್ನ ಪಾರ್ಸಲ್ ಬರುತ್ತದೆ. ನಿಗದಿತ ದಾಖಲೆಗಳನ್ನು ಸಲ್ಲಿಸಿದರೆ ಖಾತೆ ಆ್ಯಕ್ಟಿವೇಟ್ ಆಗುತ್ತದೆ. ಕೆಲ ಟೋಲ್ಗಳ ಪಕ್ಕದಲ್ಲಿ ಫಾಸ್ಟ್ಯಾಗ್ಗಳನ್ನು ನೀಡಲು ಅಂಗಡಿಗಳನ್ನು ಹಾಕಲಾಗಿದೆ.
ನೀವು ಒಂದು ವೇಳೆ ಫಾಸ್ಟ್ಯಾಗ್ ಇಲ್ಲದೇ ಟೋಲ್ಗಳಲ್ಲಿ ಹೋದಾಗ ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ತೆರಬೇಕಾಗುತ್ತದೆ. FASTag ಇದ್ದರೆ ದರದಲ್ಲೂ ಕೆಲ ರಿಯಾಯಿತಿಗಳನ್ನು ನೀಡಲಾಗುತ್ತದೆ.
Comments are closed.