ಮುಂಬೈ

1 ರೂ. ಕ್ಲಿನಿಕ್, ರೈತರ ಸಾಲ ಮನ್ನಾ; ಮಹಾರಾಷ್ಟ್ರ ಸರ್ಕಾರದ ಆಶ್ವಾಸನೆಗಳು

Pinterest LinkedIn Tumblr


ಮುಂಬೈ: ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಮೀಸಲಾತಿ, ಕ್ಲಿನಿಕ್ ಮತ್ತು ಕ್ಯಾಂಟೀನ್​ನಲ್ಲಿ ಸಬ್ಸಿಡಿ, ರೈತರ ಸಾಲ ಶೀಘ್ರ ಮನ್ನಾ ಹಾಗೂ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ. ಇವು ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿಯೂ ಸಾಮಾನ್ಯ ಕನಿಷ್ಠ ಯೋಜನೆಯಡಿ ಮಹಾರಾಷ್ಟ್ರ ಜನರಿಗೆ ನೀಡಿರುವ ಆಶ್ವಾಸನೆಯಾಗಿದೆ.

ಮಹಾ ವಿಕಾಸ್ ಅಗ್ಹಾಡಿ ಹೆಸರಿನ ಮೈತ್ರಿ ಸರ್ಕಾರ ಇಂದು ರಚನೆಯಾಗಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ಗಂಟೆಗೂ ಮುನ್ನ ಸಾಮಾನ್ಯ ಕನಿಷ್ಠ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಸಾಮಾನ್ಯ ಕನಿಷ್ಠ ಯೋಜನೆಯಲ್ಲಿ ರೈತರು, ನಿರುದ್ಯೋಗ, ಮಹಿಳೆ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸೇರಿ ಇತರೆ ಹತ್ತು ವಿಭಾಗಗಳಾಗಿ ಪ್ರತ್ಯೇಕಿಸಲಾಗಿದೆ. ಯೋಜನೆಯ ಅಂಶಗಳ ಅನುಷ್ಠಾನಕ್ಕೆ ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಒಂದು ರಾಜ್ಯ ಸಂಪುಟದೊಳಗಿನದ್ದು, ಮತ್ತೊಂದು ಇಡೀ ಮೈತ್ರಿಯನ್ನು ಒಳಗೊಂಡ ಸಮನ್ವಯ ಸಮಿತಿಯಾಗಿದೆ.

ಮಹಾ ವಿಕಾಸ್ ಅಗ್ಹಾಡಿಯ ಪ್ರಮುಖ ಆಶ್ವಾಸನೆಗಳು

ಅಕಾಲಿಕ ಮಳೆ ಮತ್ತು ಪ್ರವಾಹದಿಂದ ಬಳಲುತ್ತಿರುವ ರೈತರಿಗೆ ಶೀಘ್ರದಲ್ಲೇ ಅಗತ್ಯ ನೆರವು ಒದಗಿಸುವುದು.
ರೈತರ ಸಾಲ ಶೀಘ್ರ ಮನ್ನಾ
ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಶೇ.80ರಷ್ಟು ಮೀಸಲಾತಿಗೆ ಕಾನೂನು.
ಆರ್ಥಿಕ ದುರ್ಬಲ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ
ಆರ್ಥಿಕವಾಗಿ ದುರ್ಬಲರಾದ ಕೃಷಿ ಕಾರ್ಮಿಕರ ಮಕ್ಕಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ
ತಾಲೂಕು ಮಟ್ಟದಲ್ಲಿ ಒಂದು ರೂಪಾಯಿ ಕ್ಲಿನಿಕ್​ಗಳು ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯ ವಿಮೆ.
10 ರೂಪಾಯಿಗೆ ಗುಣಮಟ್ಟದ ಆಹಾರ ಒದಗಿಸುವುದು.

Comments are closed.