
63 ವರ್ಷದ ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದರು. ಆದರೆ, ಇದ್ದಕ್ಕಿದ್ದಂತೆಯೇ ಇವರು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ತಪಾಸಣೆ ನಡೆಸಿದ ವೈದ್ಯರಿಗೂ ಮೊದಲು ಸಮಸ್ಯೆ ಏನೆಂದು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದರೆ, ಸೂಕ್ಷ್ಮ ತಪಾಸಣೆ ನಡೆಸಿದಾಗ ಗೊತ್ತಾಗಿದ್ದು ಆತಂಕಕಾರಿ ಸಂಗತಿ. ಅದೇನೆಂದರೆ, ಈ ವ್ಯಕ್ತಿ ಕ್ಯಾಪ್ನೋಸೈಟೋಫಾಗಾ ಬ್ಯಾಕ್ಟೀರಿಯಾದ ಸೋಂಕಿಗೊಳಗಾಗಿದ್ದರು. ಈ ಬ್ಯಾಕ್ಟೀರಿಯಾ ಹೆಚ್ಚಾಗಿ ನಾಯಿ ಮತ್ತು ಬೆಕ್ಕುಗಳ ಲಾಲಾರಸದಲ್ಲಿ ಕಂಡು ಬರುತ್ತದೆ. ಆದರೆ, ಈ ಸೋಂಕು ಮನುಷ್ಯರಿಗೆ ತಗುಲುವುದು ಅತೀ ವಿರಳಾತಿ ವಿರಳವಂತೆ.
ಈ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಒಂದು ವಾರದ ಮುಂದೆ ತನ್ನ ಮುದ್ದಿನ ನಾಯಿಯೊಂದಿಗೆ ಆಟವಾಡಿದ್ದರು. ಆಗ ಶ್ವಾನ ಇವರನ್ನು ನೆಕ್ಕಿತ್ತು. ಇದಾದ ಬಳಿಕ ಇವರ ಆರೋಗ್ಯ ಹದಗೆಡುತ್ತಾ ಹೋಯಿತು. ಮೊದಲು ಜ್ವರ ಕಾಣಿಸಿಕೊಂಡಿತು. ನಂತರ ಸ್ನಾಯುಗಳ ನೋವು ಶುರುವಾಗಿತ್ತು. ಉಸಿರಾಟದ ತೊಂದರೆ, ಮುಖದ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳು ಉದ್ಭವಿಸಿದ್ದವು.
ಆಸ್ಪತ್ರೆಯಲ್ಲೂ ಕ್ಷಣಕ್ಷಣಕ್ಕೂ ಇವರ ಆರೋಗ್ಯದ ಮೇಲೆ ನಿಗಾ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ಈ ವ್ಯಕ್ತಿಗೆ ಹೃದಯಾಘಾತವಾಗಿತ್ತು. ಬಳಿಕ ಇವರ ಒಂದೊಂದೇ ಅಂಗಾಂಗಗಳು ವೈಫಲ್ಯಗೊಂಡವು. ಕೊನೆಗೆ ಇವರು ಬ್ರೈನ್ ಡ್ಯಾಮೇಜಿಗೂ ತುತ್ತಾದರು. ಹೀಗೆ ಸುಮಾರು ನಾಲ್ಕು ದಿನಗಳ ಚಿಕಿತ್ಸೆ ತೆಗೆದುಕೊಂಡ ಬಳಿಕ ವೈದ್ಯರಿಗೆ ಇವರ ಅನಾರೋಗ್ಯದ ಸ್ಪಷ್ಟ ಕಾರಣ ಗೊತ್ತಾಗಿತ್ತು. ಇಷ್ಟಕ್ಕೆಲ್ಲಾ ಕ್ಯಾಪ್ನೋಸೈಟೋಫಾಗಾ ಬ್ಯಾಕ್ಟೀರಿಯಾವೇ ಕಾರಣ ಎಂಬುದನ್ನು ವೈದ್ಯರು ಮನಗಂಡಿದ್ದರು. ಬಳಿಕ ಇದಕ್ಕೆ ಬೇಕಾದ ಚಿಕಿತ್ಸೆ ಕೂಡಾ ನಡೆಯುತ್ತಿತ್ತು. ಇದಾಗಿ 16 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಆರೋಗ್ಯಕರ ನಾಯಿ ಮತ್ತು ಬೆಕ್ಕುಗಳಲ್ಲಿ ಕ್ಯಾಪ್ನೋಸೈಟೋಫಾಗಾ ಬ್ಯಾಕ್ಟೀರಿಯಾ ಇರುವುದು ಸಾಮಾನ್ಯ. ಆದರೆ, ಇವುಗಳಿಂದ ಮನುಷ್ಯರಿಗೆ ಗಂಭೀರವಾದ ಸೋಂಕು ತಗುಲುವುದು ತುಂಬಾ ಅಪರೂಪ. ನಾಯಿಗಳು ಮುಖದ ಬಳಿ ನೆಕ್ಕಿದಾಗ, ಗಾಯವನ್ನು ನೆಕ್ಕಿದಾಗ ಅಥವಾ ಕಚ್ಚಿದಾಗ ಈ ಬ್ಯಾಕ್ಟೀರಿಯಾಗಳ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದರೆ, ಈ ಸಾಧ್ಯತೆ ತುಂಬಾ ವಿರಳಾತಿವಿರಳ. ಅದೃಷ್ಟ ಕೈಕೊಟ್ಟಾಗ ಹಗ್ಗ ಕೂಡಾ ಹಾವಾಗಿ ಕಚ್ಚುತ್ತದೆ ಎಂಬ ಮಾತಿದೆಯಲ್ವಾ ಹಾಗೆ… ಒಮ್ಮೆಮ್ಮೊ ಈ ಬ್ಯಾಕ್ಟೀರಿಯಾಗಳು ಮನುಷ್ಯನ ದೇಹದೊಳಗೆ ಪ್ರವೇಶಿಸಿ ಜೀವವನ್ನೇ ತೆಗೆದುಬಿಡುತ್ತದೆ.
ಈ ಬಗ್ಗೆ ಯುರೋಪಿಯನ್ ಜರ್ನಲ್ ಆ ಕೇಸ್ ರಿಪೋರ್ಟಸ್ ಇನ್ ಇಂಟರ್ನಲ್ ಮೆಡಿಸಿನ್ ಪೂರ್ತಿ ವರದಿ ಮಾಡಿದೆ.
ಹಾಗಂತ, ಎಲ್ಲರೂ ಆತಂಕಗೊಳ್ಳಬೇಕಾಗಿಲ್ಲ. ಇದು ತುಂಬಾ ವಿರಳಾತಿ ವಿರಳ ಸಮಸ್ಯೆ. ಹೀಗಾಗಿ, ನಿಮ್ಮ ಮುದ್ದಿನ ಪ್ರಾಣಿಗಳನ್ನೂ ದೂರ ಮಾಡಬೇಕಾಗಿಲ್ಲ. ನಾಯಿ ಬೆಕ್ಕುಗಳೊಂದಿಗೆ ಆಟವಾಡಿದರೂ ಬಳಿಕ ಚೆನ್ನಾಗಿ ಮುಖ ಕೈ ಕಾಲುಗಳನ್ನು ತೊಳೆಯಿರಿ. ಒಂದೊಮ್ಮೆ ಜ್ವರದಂತಹ ಸಮಸ್ಯೆ ಕಾಡಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ… ಭಯಪಡುವ ಅಗತ್ಯವಿಲ್ಲ…
Comments are closed.