
ನ್ಯೂ ಯಾರ್ಕ್(ನ. 23): ವಿಮಾನ ಆಗಸದಲ್ಲಿ ಹಾರುತ್ತಿರುವಾಗಲೇ ಹೊಟ್ಟೆನೋವಿನಿಂದ ಅತೀವ ನರಳಾಟ ನಡೆಸುತ್ತಿದ್ದ ವಯೋವೃದ್ಧರೊಬ್ಬರ ಪ್ರಾಣವನ್ನು ಅದೇ ವಿಮಾನದಲ್ಲಿದ್ದ ವೈದ್ಯರು ಉಳಿಸಿದ್ದಾರೆ. ವೃದ್ಧರ ಮೂತ್ರಕೋಶದಿಂದ 800 ಎಂಎಲ್ನಷ್ಟು ಮೂತ್ರ ಹೊರಸೆಳೆದು ಅವರ ಪ್ರಾಣ ಕಾಪಾಡಿದ್ದಾರೆ. ಚೀನಾದ ಗುವಾಂಗ್ಝೋದಿಂದ ಅಮೆರಿಕದ ನ್ಯೂ ಯಾರ್ಕ್ಗೆ ಹೋಗುತ್ತಿದ್ದ ಚೀನಾ ಸದರ್ನ್ ಏರ್ವೇಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.
ವಿಮಾನವು ನ್ಯೂ ಯಾರ್ಕ್ ತಲುಪಲು 6 ಗಂಟೆ ಇರುವ ಹೊತ್ತಿನಲ್ಲಿ ವೃದ್ಧರಿಗೆ ಹೊಟ್ಟೆ ನೋವಿನ ಯಾತನೆ ಶುರುವಾಗಿದೆ. ಹೊಟ್ಟೆನೋವಿನಿಂದಾಗಿ ಅವರಿಗೆಉಸಿರಾಡಲೂ ಕಷ್ಟವಾಗಿತ್ತು. ಆದರೆ ಅದೃಷ್ಟಕ್ಕೆ ಅದೇ ವಿಮಾನದಲ್ಲಿ ಡಾ. ಝಾಂಗ್ ಹಾಂಗ್ ಎಂಬ ವೈದ್ಯರಿದ್ದರು. ಜಿನಾನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಮುಖ್ಯ ಸರ್ಜನ್ ಆಗಿರುವ ಈ ವೈದ್ಯರು ತತ್ಕ್ಷಣವೇ ನೆರವಿಗೆ ಮುಂದಾದರು. ವೃದ್ಧರ ಸಂಬಂಧಿಗಳನ್ನು ವಿಚಾರಿಸಿದಾಗ ಅವರಿಗೆ ಮೂತ್ರಕೋಶದ ತೊಂದರೆ ಇರುವುದು ತಿಳಿದುಬಂತು. ವೃದ್ಧರ ಹೊಟ್ಟೆ ನೋವಿಗೆ ಕಾರಣ ಏನೆಂಬುದು ವೈದ್ಯರಿಗೆ ಗೊತ್ತಾಯಿತು.
ಕೂಡಲೇ ಕಾರ್ಯಾಚರಣೆಗೆ ಇಳಿದ ವೈದ್ಯರು ವಿಮಾನದಲ್ಲಿ ಲಭ್ಯವಿದ್ದ ಪ್ಲಾಸ್ಟಿಕ್ ನಳಿಕೆ ಮತ್ತು ಖಾಲಿ ವೈನ್ ಬಾಟಲ್ ಬಳಸಿಕೊಂಡು ವೃದ್ಧರ ಮೂತ್ರವನ್ನು ಯಶಸ್ವಿಯಾಗಿ ಹೊರತೆಗೆದರು.
“ಆ ವ್ಯಕ್ತಿಗೆ ಇನ್ನಷ್ಟು ಹೊತ್ತು ನೋವು ತಾಳಿಕೊಳ್ಳಲು ಸಾಧ್ಯವಿರಲಿಲ್ಲ. ಬ್ಲಾಡರ್ನಲ್ಲಿದ್ದ ಮೂತ್ರವನ್ನು ಹೊರ ತೆಗೆಯುವುದೊಂದೇ ದಾರಿ ಇದ್ದದ್ದು. ಸ್ವಲ್ಪ ಹೊತ್ತು ಹಾಗೇ ಇದ್ದಿದ್ದರೆ ಅವರಿಗೆ ಆಘಾತವಾಗಿ ಪ್ರಾಣಕ್ಕೆ ಅಪಾಯ ಉಂಟಾಗುವ ಸಂದರ್ಭ ಬರುತ್ತಿತ್ತು” ಎಂದು ಡಾ. ಝಾಂಗ್ ಹೋಂಗ್ ಹೇಳುತ್ತಾರೆ.
ಪ್ಲಾಸ್ಟಿಕ್ ಪೈಪ್ ಮತ್ತು ವೈನ್ ಬಾಟಲ್ ಬಳಸಿ ಮೂತ್ರ ತೆಗೆಯಲು 37 ನಿಮಿಷ ಹಿಡಿದಿದೆ. ಅಂತಿಮವಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿ ವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Comments are closed.