ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಬುಧವಾರ ನಸುಕಿನ ಜಾವ ನಿಧನ ಹೊಂದಿ ದ್ದಾರೆ. ಸಾಕಷ್ಟು ಕಾನೂನು ತಿಳುವಳಿಕೆ ಹೊಂದಿದ್ದ ಶಂಕರ ಮುನವಳ್ಳಿ ತಮ್ಮ ಹರಿತವಾದ ಮಾತುಗಳಿಂದ ಅನೇಕ ರಾಜಕೀಯ ನಾಯಕರ ನಿದ್ದೆಗೆಡಿಸಿದ್ದರು.
ಬುಧವಾರ ಬೆಳಗಿನ ಜಾವ ಕೊನೆಯುಸಿರೆಳೆಯದ ಕಾಂಗ್ರೆಸ್ ಪಕ್ಷದ ಮಾಜಿ ಕೆಪಿಸಿಸಿ ಸದಸ್ಯ ,ರಾಮದುರ್ಗದ ಶಂಕರ ಮುನವಳ್ಳಿ ಒಬ್ಬ ಸೋಲರಿಯದ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಎಂಭತ್ತರ ದಶಕದ ಆರಂಭದಲ್ಲಿ ದಿ.ಎ.ಕೆ.ಸುಬ್ಬಯ್ಯ ಅವರು ,ಬಿಜೆಪಿ ಯಿಂದ ಉಚ್ಛಾಟಿಸಲ್ಪಟ್ಟ ನಂತರ,ಕಟ್ಟಿದ ” ಕನ್ನಡ ನಾಡು” ಪ್ರಾದೇಶಿಕ ಪಕ್ಷದಲ್ಲಿ ಗುರುತಿಸಿಕೊಂಡ ಶಂಕರ ಮುನವಳ್ಳಿ ನಂತರ ಕಾಂಗ್ರೆಸ್ ಪಕ್ಷದತ್ತ ಮುಖಮಾಡಿದರು.
ಎಷ್ಟೇ ವಿವಾದಕ್ಕೊಳಗಾದರೂ,ಎಷ್ಟೇ ಎತ್ತರದ ವ್ಯಕ್ತಿಯಿದ್ದರೂ ಎದುರು ಹಾಕಿಕೊಳ್ಳುವ ಪ್ರಸಂಗ ಬಂದರೂ ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ಶಂಕರದಾಗಿತ್ತು. 1989 ರ ಸುಮಾರಿಗೆ ” ದಲಿತ ಧ್ವನಿ” ಸಾಪ್ತಾಹಿಕವನ್ನು ಆರಂಭಿಸಿದ ಶಂಕರ ಮುನವಳ್ಳಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದರು.
ಅವರು ಅನೇಕ ಬಾರಿ ಅಧಿಕಾರದ ಸ್ಥಾನಮಾನಗಳನ್ನು ತಮ್ಮ ಬಂಡಾಯದಿಂದಾಗಿಯೇ ಕಳೆದುಕೊಂಡ ಪ್ರಸಂಗಗಳೂ ಇವೆ. ಜಾತ್ಯಾತೀತ ತತ್ವಗಳಲ್ಲಿ ಅಪಾರ ನಂಬಿಗೆ ಇರಿಸಿದ್ದ ಶಂಕರ ಬಿಜೆಪಿ ಯ ರಾಷ್ಟ್ರ ಮಟ್ಟದ ನಾಯಕರನ್ನೇ ಪೇಚಿಗೆ ಸಿಲುಕಿಸಿದ್ದರು . ಯಡಿಯೂರಪ್ಪ ಅವರು ಒಮ್ಮೆ ಶಂಕರ ಬಗ್ಗೆ ಆಡಿದ ಅವಮಾನಕರ ಮಾತುಗಳ ವಿರುದ್ಧ ಶಂಕರ ನ್ಯಾಯಾಲಯದ ಮೆಟ್ಟಿಲು ಏರಿದ್ದರು.ಮಾನಹಾನಿ ಖಟ್ಲೆ ದಾಖಲಿಸಿದ್ದರು. ಕಲಿತಿದ್ದು ಕನ್ನಡ ಏಳನೇ ವರ್ಗದವರೆಗಾದರೂ ಕಾನೂನಿನ ಜ್ಞಾನ ಅವರಿಗೆ ಸಾಕಷ್ಟಿತ್ತು.

Comments are closed.