ರಾಷ್ಟ್ರೀಯ

ಸೊಳ್ಳೆ ಕಚ್ಚಿದ್ದಕ್ಕೆ ಗಂಡನಿಗೆ ಒನಕೆಯಿಂದ ಥಳಿತ!

Pinterest LinkedIn Tumblr


ಅಹಮದಾಬಾದ್: ಸೊಳ್ಳೆ ಕಚ್ಚಿದ್ದಕ್ಕೆ ಮಹಿಳೆ ತನ್ನ ಮಗಳೊಂದಿಗೆ ಸೇರಿ ಪತಿಯನ್ನು ಥಳಿಸಿರುವ ವಿಚಿತ್ರ ಘಟನೆಯೊಂದು ಗುಜರಾತಿನ ಅಹಮದಾಬಾದ್ ನಗರದ ನರೋದಾದಲ್ಲಿ ನಡೆದಿದೆ. ಹಲ್ಲೆಗೊಳಗಾದ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭೂಪೇಂದ್ರ ಲೆವಾ ಹಲ್ಲೆಗೊಳಗಾದ ಪತಿ. ಗಂಭೀರವಾಗಿ ಗಾಯಗೊಂಡಿರುವ ಭೂಪೇಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಭೂಪೇಂದ್ರ ಕಳೆದ ಕೆಲವು ತಿಂಗಳಿನಿಂದ ಕಾರಿನಲ್ಲಿ ಎಲ್‍ಇಡಿ ಲೈಟ್ ಗಳ ಮಾರಾಟ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ಚೆನ್ನಾಗಿ ಆದಾಯ ಬಾರದ ಕಾರಣ ಎರಡು ತಿಂಗಳಿನಿಂದ ಮನೆಯ ವಿದ್ಯುತ್ ಬಿಲ್ ತುಂಬಿರಲಿಲ್ಲ. ಹೀಗಾಗಿ ಅಧಿಕಾರಿಗಳು ಮನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಮಂಗಳವಾರ ರಾತ್ರಿ ಮಲಗಿದ್ದಾಗ ಫ್ಯಾನ್ ಇಲ್ಲದ ಕಾರಣ ಸೊಳ್ಳೆಗಳು ಕಚ್ಚುತ್ತಿದ್ದವು.

ಬುಧವಾರ ಬೆಳಗ್ಗೆ ಆಗುತ್ತಿದ್ದಂತೆ ಪತ್ನಿ ಸಂಗೀತಾ ರಾತ್ರಿಯೆಲ್ಲ ಸೊಳ್ಳೆ ಕಚ್ಚಿವೆ ಎಂದು ದೂರಿದ್ದಾಳೆ. ಪತಿ ಭೂಪೇಂದ್ರ ನಗುತ್ತಾ ನನ್ನ ಜೊತೆ ಮಲಗಿದ್ದರೆ ಚೆನ್ನಾಗಿ ನಿದ್ದೆ ಬರುತ್ತಿತ್ತು ಎಂದು ಪತ್ನಿಯ ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ಸಂಗೀತಾ ಅಡುಗೆ ಮನೆಗೆ ತೆರಳಿ ಒನಕೆ ತಂದು ಪತಿಯನ್ನು ಕೆಳಗೆ ಹಾಕಿ ಥಳಿಸಿದ್ದಾಳೆ. ಅಮ್ಮನಿಗೆ ಪುತ್ರಿ ಚಿತಲ್ ಸಹ ಸಾಥ್ ನೀಡಿದ್ದಾಳೆ.

ಭೂಪೇಂದ್ರ ಚೀರಾಟ ಕೇಳಿ ಮನೆಗೆ ಆಗಮಿಸಿದ ನೆರೆಹೊರೆಯವರು ಆತನನ್ನು ರಕ್ಷಿಸಿದ್ದಾರೆ. ಕೂಡಲೇ ಭೂಪೇಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಭೂಪೇಂದ್ರ ಎಡ ಕಣ್ಣಿನ ಭಾಗದಲ್ಲಿ ಏಳು ಹೊಲಿಗೆ ಹಾಕಲಾಗಿದೆ.

Comments are closed.