ಮುಂಬೈ

ಮಹಾರಾಷ್ಟ್ರದಲ್ಲಿ ಕ್ಷಣಕ್ಷಣಕ್ಕೂ ರಾಜಕೀಯ ಡ್ರಾಮಾ

Pinterest LinkedIn Tumblr


ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ರಾಜಕಾರಣ ಕ್ಷಣ ಕ್ಷಣಕ್ಕೂ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದ್ದು, ಶಿವಸೇನೆಗೆ ನೀಡಿದ್ದ ಆಹ್ವಾನದ ಅನ್ವಯ ಸರ್ಕಾರ ರಚಿಸಲು ವಿಫಲರಾದ ಹಿನ್ನೆಲೆಯಲ್ಲಿ 54 ಶಾಸಕರನ್ನು ಹೊಂದಿರುವ ಎನ್‍ಸಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.

ಇಂದು ಕಾಂಗ್ರೆಸ್ ಹೈಕಮಾಂಡ್ ಎರಡು ಬಾರಿ ಮಹಾರಾಷ್ಟ್ರ ನಾಯಕರೊಂದಿಗೆ ಸಭೆ ನಡೆಸಿದರು ಕೂಡ ಎನ್‍ಸಿಪಿಯೊಂದಿಗೆ ಸರ್ಕಾರಕ್ಕೆ ಬೆಂಬಲ ನೀಡುವ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಶಿವಸೇನೆ ನಾಯಕರು ಮತ್ತೆರಡು ದಿನಗಳ ಕಾಲ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಶಿವಸೇನೆಯ ಮನವಿಯನ್ನು ತಿರಸ್ಕರಿಸಿದ ರಾಜ್ಯಪಾಲರು ಎನ್‍ಸಿಪಿಗೆ ಆಹ್ವಾನ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿ ಮಾತನಾಡಿರುವ ಎನ್‍ಸಿಪಿ ನಾಯಕ ಜಯಂತ್ ಪಾಟೀಲ್, ಮಂಗಳವಾರ ರಾತ್ರಿ 8.30ರ ವರೆಗೂ ಸರ್ಕಾರ ರಚನೆ ಮಾಡಲು ಕಾಲಾವಕಾಶ ನೀಡಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇತ್ತ ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್, ಯಾವುದೇ ಅಧಿಕೃತ ತೀರ್ಮಾನ ಕೈಗೊಂಡಿಲ್ಲ. ನಾಳೆ ಎನ್‍ಸಿಪಿ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

ಸದ್ಯ ಎನ್‍ಸಿಪಿ ಏನು ಮಾಡಲಿದೆ ಎಂಬ ಕುತೂಹಲ ಮೂಡಿದೆ. ಇದರ ನಡುವೆಯೇ ಎನ್‍ಸಿಪಿ, ಕಾಂಗ್ರೆಸ್ ಮಾತುಕತೆ ಮುಂದುವರಿಸಿದ್ದು, ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದೇವೆ. ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರು ಮತ್ತೊಮ್ಮೆ ರಾಜ್ಯಪಾಲರನ್ನು ಮತ್ತೊಮ್ಮೆ ಭೇಟಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ತೆಗೆದುಕೊಳ್ಳುವ ನಿರ್ಧಾರದತ್ತ ಶಿವಸೇನೆಯ ಉದ್ಧವ್ ಠಾಕ್ರೆ ಕಾದು ಕುಳಿತ್ತಿದ್ದು, ಮೂಲಗಳ ಪ್ರಕಾರ, ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಕಾಂಗ್ರೆಸ್‍ನಲ್ಲಿ ಒಡಕು ಧ್ವನಿ ಕೇಳಿಬರುತ್ತಿದೆ. ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಬಹಿರಂಗವಾಗಿಯೇ ಮೈತ್ರಿಯನ್ನು ವಿರೋಧಿಸಿದ್ದಾರೆ.
ಶಿವಸೇನೆಗೆ ರಾಜ್ಯಪಾಲರು ಕೊಟ್ಟಿದ್ದ ಗಡುವು ಅಂತ್ಯವಾಗಿದ್ದು, 2 ದಿನ ಹೆಚ್ಚುವರಿ ಸಮಯವನ್ನು ನಿರಾಕರಿಸಿದರು. ಸದ್ಯ ಅವರ ಮುಂದಿರುವ ಆಯ್ಕೆಯಂತೆ ಸರ್ಕಾರ ರಚಿಸಲು 3ನೇ ಅತಿದೊಡ್ಡ ಪಕ್ಷ ಎನ್‍ಸಿಪಿಗೆ ಆಹ್ವಾನ ನೀಡಿದ್ದಾರೆ. ಎನ್‍ಸಿಪಿಯೂ ಸರ್ಕಾರ ರಚಿಸಲು ವಿಫಲವಾದರೆ ರಾಜ್ಯಪಾಲರು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಹಾಗೂ ವಿಧಾನಸಭೆ ವಿಸರ್ಜನೆ ಮಾಡಿ ಹೊಸದಾಗಿ ಚುನಾವಣೆ ನಡೆಸುವ ಆಯ್ಕೆಗಳನ್ನು ಹೊಂದಿದ್ದಾರೆ.

Comments are closed.