ಕರಾವಳಿ

ಫೇಸ್‌ಬುಕ್‌ನಲ್ಲಿ ತುಳು ದೈವಾರಾಧನೆ ಬಗ್ಗೆ ನಿಂದನೆ : ಮಂಗಳೂರು ಪೊಲೀಸರಿಂದ ಸಿದ್ದಾಪುರದಲ್ಲಿ ಆರೋಪಿಯ ಸೆರೆ

Pinterest LinkedIn Tumblr

ಮಂಗಳೂರು : ಸಾಮಾಜಿಕ ಜಲತಾಣಗಳ ಮೂಲಕ ತುಳು ದೈವಾರಾಧನೆ ಬಗ್ಗೆ ನಿಂದನಾತ್ಮಕ ಬರಹಗಳನ್ನು ಫೋಸ್ಟ್ ಮಾಡುತ್ತಿದ್ದ ಉತ್ತರ ಕನ್ನಡ ಮೂಲದ ಆರೋಪಿಯೋರ್ವನನ್ನು ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮುದ್ದುರಾಜ ಕನ್ನಡಿಗ ಯಾನೆ ಮುದ್ದುರಾಜ ದೇಸಾಯಿಗೌಡ (37) ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಫೇಸ್‌ಬುಕ್‌ನಲ್ಲಿ ‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಪೇಜ್ ತೆರೆದು ಅದರಲ್ಲಿ ತುಳುನಾಡಿನ ದೈವಾರಾಧನೆಯ ಬಗ್ಗೆ ನಿಂದಿಸುತ್ತಿದ್ದ. ಈ ಬಗ್ಗೆ ಅರ್ನಾಲ್ಡ್ ತುಳುವೆ ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ‘ಆರೋಪಿಯು ಭಕ್ತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಕಾನೂನು ಕ್ರಮ ಜರಗಿಸುವಂತೆ’ ಎಂದು ಒತ್ತಾಯಿಸಿದ್ದರು.

ದೂರು ಸ್ವೀಕರಿಸಿದ ಸೈಬರ್ ಕ್ರೈಂ ಪೊಲೀಸರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸಿದ್ದಾಪುರದ ಅವರಗುಪ್ತಾ ಎಂಬಲ್ಲಿ ಬಂಧಿಸಿ ಕ್ರಮ ಜರುಗಿಸಿದ್ದಾರೆ. ಆರೋಪಿಯಿಂದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸೈಬರ್ ಕ್ರೈಂ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಗೋವಿಂದ ರಾಜು, ಸಿಬ್ಬಂದಿಗಳಾದ ಓಂದಾಸ್, ಕುಮಾರ್, ದಿನೇಶ್ ಬೇಕಲ್, ಮಾಯಾ ಪ್ರಭು, ವಿಜಯ ಶೆಟ್ಟಿ, ವಿದೀಪ್, ಮನೋಜ್ ಕುಮಾರ್ ಪಾಲ್ಗೊಂಡಿದ್ದರು.

Comments are closed.