ಕರ್ನಾಟಕ

ಉಪಚುನಾವಣೆಗೆ 15 ಕ್ಷೇತ್ರಗಳಲ್ಲೂ ಅಭ್ಯರ್ಥಿ ಹಾಕುತ್ತೇವೆ; ಕುಮಾರಸ್ವಾಮಿ

Pinterest LinkedIn Tumblr


ಮೈಸೂರು(ಸೆ.21): ಜೆಡಿಎಸ್​ ಹೋಗಲಿ ಅಂತ ತುಂಬ ಜನ ಕಾಯುತ್ತಿದ್ದಾರೆ. ರಾಜ್ಯ ನಾಯಕರೇ ಜೆಡಿಎಸ್​ ಹೋಗಲಿ ಅಂತಿದ್ದಾರೆ. ಹೈಕಮಾಂಡ್​ ಮಟ್ಟದಲ್ಲಿ ಯಾರೂ ಹೇಳುತ್ತಿಲ್ಲ. ಆದರೆ ನಾವು 15 ಕ್ಷೇತ್ರಗಳಲ್ಲಿ 8 ರಿಂದ 10 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಆರ್.ಆರ್.ನಗರ ಮತ್ತು ಮಸ್ಕಿ ವಿಚಾರ ಆಮೇಲೆ ಇರಲಿ. ಈ 15 ಕ್ಷೇತ್ರಗಳ ಉಪಚುನಾವಣೆ ಮೇಲೆ ಮುಂದಿನ ರಾಜ್ಯ ರಾಜಕಾರಣ ನಿರ್ಧಾರವಾಗಲಿದೆ. 15 ಕ್ಷೇತ್ರಗಳಲ್ಲಿಯೂ ಜೆಡಿಎಸ್​ ಅಭ್ಯರ್ಥಿ ಹಾಕುತ್ತೇವೆ. ಇದು ಪಕ್ಷದ ನಿರ್ಧಾರವಾಗಿದೆ. ಇದು ನನ್ನ ವೈಯುಕ್ತಿಕ ನಿರ್ಧಾರವೂ ಹೌದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ಧಾರೆ.

ಮೈಸೂರಿನಲ್ಲಿ ನಡೆದ ಜೆಡಿಎಸ್​ ಚಿಂತನಾ ಮಂಥನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್​ಡಿಕೆ, ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದರು. “ಮೈತ್ರಿ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ. ನನಗೆ ಯಾವುದೇ ಬೆಂಬಲ ಇರಲಿಲ್ಲ. ಆದರೂ ರೈತ ಪರ ಕೆಲಸ ಮಾಡಿದ್ದೇನೆ,” ಎಂದು ಮೈತ್ರಿ ಸರ್ಕಾರವನ್ನು ಕೆಟ್ಟ ಸರ್ಕಾರ ಎಂದು ಜರಿದರು.

“ಮೈಸೂರು ಭಾಗದ ನಾಯಕರೇ ಕುಮಾರಸ್ವಾಮಿ ಸಿಎಂ ಆಗಲ್ಲ. ಅದಕ್ಕಾಗಿ ಸಾಲ ಮನ್ನಾದ ಮಾತನಾಡಿದ್ದಾರೆ ಎಂದು ಹೇಳಿದ್ದರು. ನಾನು ಅದನ್ನು ಮಾಡಿ ತೋರಿಸಬೇಕೆಂದು ಸಾಲಮನ್ನಾ ಮಾಡಿದೆ. ನಾನು ಸರ್ಕಾರ ಮಾಡಿದ ಮೊದಲ ದಿನವೇ ಗೊತ್ತಿತ್ತು. ನನ್ನಿಂದ ಕಾರ್ಯಕರ್ತರು ದೂರು ಆಗುತ್ತಾರೆ ಎಂದು. ಆದರೂ ರೈತರ ಕಾರಣದಿಂದ ಸರ್ಕಾರ ಮುಂದುವರಿಸಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಕೆಟ್ಟ ಸರ್ಕಾರದಲ್ಲಿ ಸಂಪೂರ್ಣ ಬೆಂಬಲ ಇಲ್ಲದ್ದಿದ್ದರೂ ನಾನು ರೈತರ ಪರವಾಗಿ ನಿಂತೆ. ಹುಣಸೂರು 11 ಸಾವಿರ ಜನರಿಗೆ ಸಾಲಮನ್ನಾ ಆಗಿದೆ. ಈ ಬಗ್ಗೆ ಜನ ತೀರ್ಮಾನ ಮಾಡಬೇಕಿದೆ. ಯಾರು ರೈತರ ಪರವಾಗಿದ್ದಾರೆ ಎಂಬುದನ್ನು ನೀವೇ ತೀರ್ಮಾನ ಮಾಡಿ. ಕಾಂಗ್ರೆಸ್ ರೈತರ ಪರವಾಗಿದೆಯೋ, ಬಿಜೆಪಿ ರೈತರ ಪರವಾಗಿದೆಯೋ ಅಥವಾ ಜೆಡಿಎಸ್ ರೈತರ ಪರವಾಗಿದೆಯೋ ಯೋಚನೆ ಮಾಡಿ ಎಂದು ಹೇಳಿದರು.

ಹುಣಸೂರಿಗೆ ಉಪಚುನಾವಣೆ ಬಂದಿದೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಲೇಬೇಕು. ಪಕ್ಷಕ್ಕಾಗಿ ಎಲ್ಲ ತ್ಯಾಗ ಮಾಡಿದ್ದು ಹುಣಸೂರು. ನಮ್ಮ ಅಭ್ಯರ್ಥಿ ಗೆಲುವಿಗೆ ಸಂಪೂರ್ಣ ಸಹಕಾರ ಹಾಗೂ ನನ್ನ ಸಂಪೂರ್ಣ ಸಮಯ ಮೀಸಲಿಡುತ್ತೇನೆ. ಹುಣಸೂರಿನಲ್ಲಿ ನಾವು ಗೆಲ್ಲಲೇಬೇಕು. ನಮ್ಮ ಹೋರಾಟ ಉಳಿಯಲೇಬೇಕು. ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಏನೂ ಇಲ್ಲ. ಹುಣಸೂರಿನಲ್ಲಿ ಅವರು ಎಷ್ಟೇ ದುಡ್ಡು ಖರ್ಚು ಮಾಡಿದರೂ ನಿಮ್ಮ ಮುಂದೆ ಅದು ನಡೆಯಲ್ಲ. ನನಗೆ ಆ ಕ್ಷೇತ್ರದಲ್ಲಿ ನೀವು ತೋರಿದ ಪ್ರೀತಿ ಮರೆಯಲ್ಲ‌ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಹೆಸರಿನಲ್ಲಿ ದಂಧೆ ನಡೆಯುತ್ತಿದೆ. ಮೋದಿ ಅವರು ಅಮೆರಿಕಾ, ರಷ್ಯಾ ಹೋಗಿದ್ದಾರೆ. ಅಲ್ಲಿಗೆ ಕೋಟ್ಯಂತರ ರೂ. ಕೊಡುತ್ತಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ವಿಚಾರದ ಬಗ್ಗೆ ಮೋದಿ ಗಮನ ಹರಿಸಿದ್ದಾರೆ. ಬೀದಿಯಲ್ಲಿ ಮಲಗಿರುವ ನಮ್ಮ ಜನರನ್ನು ನೋಡಿಲ್ಲ. ಇದೇ ನಮ್ಮ ಚುನಾವಣಾ ವಿಷಯವಾಗಿದೆ. ಅದೇ ವಿಷಯಗಳ‌ನ್ನು ಜನರ ಮುಂದೆ ಇಡೋಣ ಎಂದರು.

ಈ ಚುನಾವಣೆ ನನಗೆ ಸವಾಲು

ಈ ಉಪಚುನಾವಣೆ ನನಗಷ್ಟೇ ಅಲ್ಲ, ಜನರಿಗೂ ಸವಾಲಾಗಿದೆ. ಹಾಗಾಗಿ ಈ ಚುನಾವಣೆ ನಮ್ಮೆಲ್ಲರಿಗೂ ಸವಾಲು ಎಂದು ಕರೆ ನೀಡಿದರು.

ಬಿಜೆಪಿ ಸರ್ಕಾರ ಬೀಳುತ್ತೆ

ಈ ಚುನಾವಣೆ ನಂತರ ಬಿಜೆಪಿ ಸರ್ಕಾರ ಮುಂದುವರೆಯಲ್ಲ. ಈ ಸರ್ಕಾರ ಬಂದಿರೋದು ಹೇಗೆ ಅಂತ ಜನರಿಗೆ ಗೊತ್ತಿದೆ. ನಾನೇನು ಕೋಡಿಮಠ ಸ್ವಾಮೀಜಿಯಂತೆ ಭವಿಷ್ಯ ಹೇಳಲ್ಲ. ಆದರೆ ಈ ಸರ್ಕಾರದ ನಡವಳಿಕೆ ಬಗ್ಗೆ ಜನರಿಗೆ ಗೊತ್ತಿರುವುದರಿಂದ ಈ ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದರು.

Comments are closed.