ಕರಾವಳಿ

ಮೂಲ ಸಮಿತಿಯ ಸುಪರ್ದಿಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ : ಶಾಸಕ ಯು .ಟಿ. ಖಾದರ್ ಸ್ಪಷ್ಟನೆ

Pinterest LinkedIn Tumblr

ಮಂಗಳೂರು : ‘ಜಿಲ್ಲೆಯಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವದ ನೇತೃತ್ವವನ್ನು 1997 ರಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವಹಿಸಿಕೊಂಡಿದೆ. ಈ ಸಮಿತಿಯಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರತಿಭಾವಂತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ .ಬದಲಾದ ಪರಿಸ್ಥಿತಿಯಲ್ಲಿ ಸರಕಾರದ ಅನುದಾನದಿಂದ ಉತ್ಸವ ನಡೆಯುತ್ತಿದ್ದರೂ ಅದನ್ನು ಮೂಲ ಸಮಿತಿಯ ಸುಪರ್ದಿಯಲ್ಲಿಯೇ ಇನ್ನು ಮುಂದೆ ಆಚರಿಸಲಾಗುವುದು’ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಮತ್ತು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಾರಿಯ ಉತ್ಸವವನ್ನು ಅಸೈಗೋಳಿಯಲ್ಲಿ ನಡೆಸುವ ವಿಷಯವಾಗಿ ಶಾಸಕರು ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ಬಯಸಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ನಿಯೋಗವೊಂದು ಅವರನ್ನು ಭೇಟಿಯಾದಾಗ ಅವರು ಈ ರೀತಿ ಸ್ಪಷ್ಟನೆ ನೀಡಿದರು.

ರಾಣಿ ಅಬ್ಬಕ್ಕನ ಕೊಡುಗೆಯ ಬಗ್ಗೆ ಅಧ್ಯಯನಾತ್ಮಕವಾದ ಕೆಲಸಗಳನ್ನು ಮಾಡಲು ಹೊಸ ಸಂಘಟನೆಗಳನ್ನು ಕಟ್ಟಿಕೊಳ್ಳುವುದು ತಪ್ಪಲ್ಲ; ಆದರೆ ಅವುಗಳ ನಡುವೆ ಬಿಕ್ಕಟ್ಟು ಕೂಡದು. ಅಬ್ಬಕ್ಕ ಉತ್ಸವವು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಎಂದಿನಂತೆ ನಡೆಯಬೇಕು‌. ಇದರಲ್ಲಿ ರಾಷ್ಟ್ರೀಯ ಪ್ರತಿಷ್ಠಾನ ಮತ್ತು ಸ್ಥಳೀಯ ಸಮಿತಿ ಒಟ್ಟಾಗಿ ದುಡಿಯಬೇಕಾಗಿದೆ. ಅಬ್ಬಕ್ಕ ರಾಣಿಯ ಕುರಿತು ರಾಷ್ಟ್ರ ಮಟ್ಟದಲ್ಲಿ ವಿಭಿನ್ನ ಸ್ವರೂಪದ ಕಾರ್ಯಕ್ರಮಗಳನ್ನು ಏರ್ಪಡಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರಕಾರವನ್ನು ಕೇಳಲಾಗುವುದು’ ಎಂದವರು ಭರವಸೆ ನೀಡಿದರು.

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ , ಕೋಶಾಧಿಕಾರಿ ಪಿ.ಡಿ.ಶೆಟ್ಟಿ; ವಿರಾಂಟ್ ಪದಾಧಿಕಾರಿಗಳಾದ ತ್ಯಾಗಂ ಹರೇಕಳ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ವಿಜಯಲಕ್ಷ್ಮಿ ಬಿ. ಶೆಟ್ಟಿ, ಸುಮಾ ಪ್ರಸಾದ್ ಮೊದಲಾದ ಪ್ರಮುಖರು ನಿಯೋಗದಲ್ಲಿದ್ದು ಶಾಸಕರೊಂದಿಗೆ ಮಾತುಕತೆ ನಡೆಸಿದರು.

ಪುರಭವನದಲ್ಲಿ ‘ವಿರಾಂಟ್’ ಏರ್ಪಡಿಸಿದ್ದ ‘ನಮ್ಮ ಅಬ್ಬಕ್ಕ – ಶ್ರಾವಣ ಸಂಭ್ರಮ’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದ ಮಾಜಿ ಉಸ್ತುವಾರಿ ಸಚಿವರು ತಮ್ಮ ಹೇಳಿಕೆಯನ್ನು ಅಲ್ಲಿ ಪುನರುಚ್ಚರಿಸಿದ್ದರು.

Comments are closed.