
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸರಕಾರ ಜಾರಿಗೊಳಿಸಿದ್ದ ‘ಆರೋಗ್ಯ ಕರ್ನಾಟಕ ಯೋಜನೆ’ಯನ್ನು ರದ್ದುಪಡಿಸಿ ಕೇಂದ್ರದ ‘ಆಯುಷ್ಮಾನ್ ಭಾರತ್’ ಯೋಜನೆಯಡಿಯೇ ರಾಜ್ಯದಲ್ಲಿ ಆರೋಗ್ಯ ಸೇವೆ ಒದಗಿಸಲು ಬಿಜೆಪಿ ಸರಕಾರ ಚಿಂತನೆ ನಡೆಸಿದೆ.
ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಸೌಲಭ್ಯ ಮಿತಿಯಿದ್ದು, ‘ಆಯುಷ್ಮಾನ್ ಭಾರತ್’ ಯೋಜನೆಯಡಿ 5 ಲಕ್ಷ ರೂ.ವರೆಗೆ ಪ್ರತಿ ಕುಟುಂಬಕ್ಕೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿದೆ. ರಾಜ್ಯದ ಬಹುತೇಕ ಬಿಪಿಎಲ್ ಕುಟುಂಬಗಳು ‘ಆಯುಷ್ಮಾನ್ ಭಾರತ್’ ವ್ಯಾಪ್ತಿಯಲ್ಲಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲ ಬಡ ಕುಟುಂಬಗಳಿಗೂ 5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ದೊರೆಯುವಂತ ವ್ಯವಸ್ಥೆ ಜಾರಿಯಾಗಬೇಕು ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಎಲ್ಲ ಸರಕಾರಿ ಹಾಗೂ ಖಾಸಗಿ ಸಹಿತ 2,806 ಆಸ್ಪತ್ರೆಗಳಲ್ಲಿ ಸೇವೆ ಒದಗಿಸಲು 63,96,139 ‘ಆರೋಗ್ಯ ಕರ್ನಾಟಕ’ ಕಾರ್ಡ್ಗಳನ್ನು ವಿತರಿಸಲಾಗಿದೆ. ಆದರೆ ಈ ಯೋಜನೆ ರದ್ದಾಗಲಿದೆಯೇ ಎಂಬ ಪ್ರಶ್ನೆ ಈಗ ಮೂಡಿದೆ.
ಆದರೆ ಆರೋಗ್ಯ ಕರ್ನಾಟಕ ಯೋಜನೆ ರದ್ದಾದರೆ ಈಗಾಗಲೇ ಆ ಹೆಸರಿನಲ್ಲಿ ವಿತರಿಸಿರುವ ಕಾರ್ಡ್ ಹಾಗೂ ಖಾಸಗಿ ಆಸ್ಪತ್ರೆಗಳ ಜತೆ ಮಾಡಿಕೊಂಡಿರುವ ಒಪ್ಪಂದ ಏನಾಗಬಹುದು, ರಾಜ್ಯ ಸರಕಾರ ಹಣ ಭರಿಸುವಂತಿಲ್ಲವೇ ಎಂಬ ಗೊಂದಲವಂತೂ ಇದೆ.
Comments are closed.