
ನವದೆಹಲಿ: ಲಾಹೋರ್ನ ಗುಲ್ಶಾನ್ ಎ ರಾವಿ ಏರಿಯಾದಲ್ಲಿರುವ ಅಮರಿಕನ್ ಲಿಸ್ಟಫ್ ಶಾಲೆಗೆ ಅದೇ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಬೆಂಕಿ ಹಚ್ಚಿದ್ದಾರೆ. ಇದನ್ನು ಕಿಡಿಗೇಡಿತನ ಅನ್ನಬೇಕೋ ಅಥವಾ ನೋವನ್ನು ಹೊರಹಾಕಿದ ಬಗೆ ಎನ್ನಬೇಕೋ ಎಂಬುದನ್ನು ಈ ಸುದ್ದಿ ಓದಿದ ಬಳಿಕವಷ್ಟೇ ತೀರ್ಮಾನಿಸಬಹುದು.
ಇದು ಗುರುವಾರ ಬೆಳಗ್ಗೆ ನಡೆದಿರುವ ಘಟನೆಯಾದರೂ ತಡವಾಗಿ ಬೆಳಕಿಗೆ ಬಂದಿದೆ. ಅಂದು ಬೆಳಗ್ಗೆ ಸಿಟ್ಟಿನಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು ತಮ್ಮೊಂದಿಗೆ ಪೆಟ್ರೋಲ್ ತುಂಬಿದ್ದ ಬಾಟಲಿಗಳನ್ನು ತಂದಿದ್ದರು. ಅಲ್ಲದೆ ಶಾಲಾ ಕಟ್ಟಡದ ಎರಡು ಕೊಠಡಿಗಳಿಗೆ ಬೆಂಕಿಯನ್ನೂ ಹಚ್ಚಿದ್ದಾರೆ. ಅದಕ್ಕೆ ಕಾರಣ ಹೀಗಿದೆ…
ಹಫೀಜ್ ಹುನೈನ್ ಬಿಲಾಲ್ ಎಂಬಾತ ಈ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ. ಹಿಂದಿನ ದಿನ ಮಾಡಿದ್ದ ಪಾಠವನ್ನು ಮನನ ಮಾಡಿಕೊಂಡು ಬರುವಂತೆ ಕೊಡಲಾಗಿದ್ದ ಹೋಂವರ್ಕ್ ಅನ್ನು ಮಾಡಿಕೊಳ್ಳದೇ ಬಂದಿದ್ದ. ಈ ಕಾರಣಕ್ಕಾಗಿ ಶಿಕ್ಷಕ ಖಮ್ರಾನ್ ಎಂಬುವರು ಆ ಬಾಲಕನ ಬೆನ್ನು, ಹೊಟ್ಟೆ ಭಾಗಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ ಆತನ ತಲೆಯನ್ನು ಗೋಡೆಗೆ ಜಪ್ಪಿದ್ದರು. ಪೆಟ್ಟಿನಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ. ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ತೋರಿದ್ದರಿಂದ ಆತ ಮೃತಪಟ್ಟಿದ್ದ. ವಿದ್ಯಾರ್ಥಿಯನ್ನು ಖಮ್ರಾನ್ ಮನಬಂದಂತೆ ಥಳಿಸುತ್ತಿರುವ ದೃಶ್ಯವನ್ನು ಮೊಬೈಲ್ನಲ್ಲಿ ಚೀತ್ರೀಕರಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ. ಇದು ವೈರಲ್ ಆಗಿತ್ತು.
ತಮ್ಮ ಸಹಪಾಠಿಯ ಮೇಲೆ ಶಿಕ್ಷಕರು ನಡೆಸಿದ ದೌರ್ಜನ್ಯದಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಶಾಲೆಗೆ ಬೆಂಕಿ ಹಚ್ಚಿದರು ಎನ್ನಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಟುಂಬದವರೂ ತಮಗೆ ನ್ಯಾಯ ಕೊಡಿಸಬೇಕು, ಶಿಕ್ಷಕ ಕಮ್ರಾನ್ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ಪ್ರಾಥಮಿಕ ಶಿಕ್ಷಣ ಸಚಿವ ಮುರಾದ್ ರಾಸ್ ಮೃತ ಬಾಲಕನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Comments are closed.