ಕರ್ನಾಟಕ

ಕಾಲೇಜು ಮೆಟ್ಟಿಲು ಹತ್ತುವವರೆಗೂ ಚಪ್ಪಲಿ ಹಾಕದ ಇಸ್ರೋ ಅಧ್ಯಕ್ಷ!

Pinterest LinkedIn Tumblr


ಬೆಂಗಳೂರು: ಬಹಳಷ್ಟು ಜನರಿಗೆ ನೆನ್ನೆಯವರೆಗೂ ಕೈಲಾಸವಾಡಿಯೋ ಶಿವನ್​ ಅಥವಾ ಕೆ.ಶಿವನ್​ ಯಾರೆಂಬುದು ಗೊತ್ತಿರಲಿಲ್ಲ. ಇಂದು ಮುಂಜಾನೆ ಚಂದ್ರಯಾನ-2 ಲ್ಯಾಂಡರ್ ವಿಕ್ರಂ​ ಚಂದ್ರದ ಮೇಲೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಇಳಿಯಬೇಕು ಎನ್ನುವಾಗ ಸಂಪರ್ಕ ಕಡಿತಗೊಂಡಾಗ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಅಳುತ್ತಿದ್ದ ಶಿವನ್​ ಅವರನ್ನು ಪ್ರಧಾನಿ ಮೋದಿ ಅಪ್ಪಿಕೊಂಡು ಬೆನ್ನು ಸವರಿ, ಸಾಂತ್ವನ ಹೇಳಿದ ಬಳಿಕ ಇಡೀ ದೇಶಕ್ಕೆ ಕೆ.ಶಿವನ್​ ಯಾರು, ಅವರ ಸಾಧನೆ ಏನು ಎಂಬುದು ಮನಮುಟ್ಟುವಂತೆ ಮನದಟ್ಟಾಗಿದೆ.

ಕಳೆದ ವರ್ಷ ಇಸ್ರೋ ಅಧ್ಯಕ್ಷರಾದ 62 ವರ್ಷದ ಕೆ. ಶಿವನ್​, ಚಂದ್ರಯಾನ 2 ನೇತೃತ್ವದ ವಹಿಸಿದ್ದ ರಾಕೆಟ್​ ವಿಜ್ಞಾನಿ. ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಶಿವನ್​ ಕಾಲೇಜು ಮೆಟ್ಟಿಲು ಹತ್ತುವವರೆಗೂ ಚಪ್ಪಲಿ ಹಾಕದೆ, ಬರಿಗಾಲಿನಲ್ಲಿ ಓಡಾಡಿದವರು. ಶಿಕ್ಷಣದಿಂದ ಹಿಡಿಯ ವೃತ್ತಿ ಜೀವನದವರೆಗೂ ಅವರು ಬಯಸಿದ್ದು ಯಾವುದೂ ಅವರಿಗೆ ಸುಲಭವಾಗಿ ದಕ್ಕಿಲ್ಲ.

ತಮಿಳುನಾಡು ಮೂಲದ ಕೆ.ಶಿವನ್​ 2018ರ ಜನವರಿಯಲ್ಲಿ ಕನ್ನಡಿಗ ಎ.ಎಸ್​.ಕಿರಣ್​ಕುಮಾರ್ ಅವರ ನಿವೃತ್ತಿಯಿಂದ ತೆರವಾದ ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಏರಿದ ಒಂಭತ್ತನೆಯವರು.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತರಕ್ಕನವಿಲ್ಲೈ ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಶಿವನ್​, ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ್ದರು. ಸುದ್ದಿವಾಹಿನಿಗೆ ಅವರು ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯ, ಕಟುಂಬ, ಶಿಕ್ಷಣ, ವೃತ್ತಿ ಜೀವನ ಎಲ್ಲದರ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದರು. ಅವರು ಹೇಳಿದಂತೆ…

“ನನ್ನ ಹಳ್ಳಿಯ ಜೀವನ ತುಂಬಾ ಆಸಕ್ತಿದಾಯಕವಾಗಿತ್ತು. ನನ್ನ ತಂದೆ ಒಬ್ಬ ಕೃಷಿಕ. ನಾನು ಅವರೊಂದಿಗೆ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದೆ. ಮಾವಿನ ಸಮಯದಲ್ಲಿ ನಮ್ಮ ತಂದೆ ಮಾವು ವ್ಯಾಪಾರವನ್ನು ಮಾಡುತ್ತಿದ್ದರು. ರಜೆಯ ಸಮಯದಲ್ಲಿ ನಾನು ತಂದೆಯ ಜೊತೆಗೆ ಹೋಗಿ, ಅವರಿಗೆ ಸಹಾಯ ಮಾಡುತ್ತಿದ್ದೆ. ನಾನು ಅವರ ಜೊತೆ ಇದ್ದಾಗ ಅವರ ಬೇರೆ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಳ್ಳುತ್ತಿರಲಿಲ್ಲ. ನಾನು ಕಾಲೇಜು ಓದುವಾಗಲೂ ತಂದೆಯ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ,”

“ಸಾಮಾನ್ಯವಾಗಿ, ಜನರು ವಿವಿಧ ಮಾನದಂಡಗಳಲ್ಲಿ ಕಾಲೇಜುಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ನನ್ನ ತಂದೆ ನನ್ನ ಶಿಕ್ಷಣಕ್ಕೆ ಕಾಲೇಜು ಆಯ್ಕೆ ಮಾಡುವ ಮಾನದಂಡವೇ ಬೇರೆಯಾಗಿತ್ತು. ಅವರು ನನ್ನನ್ನು ಮನೆಯ ಹತ್ತಿರದಲ್ಲಿದ್ದ ಕಾಲೇಜಿಗೆ ಸೇರಿದ್ದರು. ಏಕೆಂದರೆ ನಾನು ಕಾಲೇಜಿನಿಂದ ಬೇಗನೇ ಮನೆಗೆ ಬಂದು ಅವರಿಗೆ ನೆರವಾಗಲಿ ಎಂಬುದು ಅವರ ಮಾನದಂಡವಾಗಿತ್ತು.”

“ನಾನು ಚಪ್ಪಲಿ ಹಾಕಲು ಆರಂಭಿಸಿದ್ದೆ ಮದ್ರಾಸ್​ ಇನ್ಸ್​ಟಿಟ್ಯೂಟ್​ ಆಫ್​ ಕಾಲೇಜು ಅಧ್ಯಯನ ಆರಂಭಿಸಿದಾಗ. ಅಲ್ಲಿಯವರೆಗೂ ನಾನು ಬರಿಗಾಲಿನಲ್ಲೇ ಓಡಾಡುತ್ತಿದ್ದೆ. ನನ್ನ ಬಳಿ ಆಗ ಪ್ಯಾಂಟ್​ಗಳು ಕೂಡ ಇರಲಿಲ್ಲ. ಯಾವಾಗಲು ಪಂಚೆಯನ್ನೇ ಉಡುತ್ತಿದ್ದೆ. ನಾನು ನನ್ನ ತಂದೆ-ತಾಯಿಗೆ ತುಂಬಾ ಕೃತಜ್ಞತೆಯನ್ನು ಅರ್ಪಿಸುತ್ತೇನೆ, ಏಕೆಂದರೆ, ಅವರು ನನಗೆ ಶಿಕ್ಷಣದ ಜೊತೆಗೆ ದಿನಕ್ಕೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಕೊಟ್ಟಿದ್ದಾರೆ.”

“ನಾನು ಇಂಜಿನಿಯರಿಂಗ್​ ಓದಬೇಕು ಎಂದು ಆಸೆಪಟ್ಟಿದ್ದೆ. ಆದರೆ, ನನ್ನ ತಂದೆ ಬಳಿ ಅಷ್ಟೊಂದು ಹಣವಿಲ್ಲದ ಕಾರಣಕ್ಕೆ ನಾನು ಬಿ.ಎಸ್ಸಿ ಮ್ಯಾಥಮೆಟಿಕ್ಸ್​ ಓದಬೇಕಾಯಿತು. ಆ ಬಳಿಕ ತಂದೆಯವರು, ನಿನಗೆ ಏನನ್ನು ಓದಬೇಕು ಅನಿಸುತ್ತದೆ ಅದನ್ನು ಓದು. ಎಂಜಿನಿಯರಿಂಗ್​ಗಾಗಿ ನಾನು ಜಮೀನನ್ನು ಮಾರಲು ಸಿದ್ಧನಿದ್ದೇನೆ ಎಂದು ಹೇಳಿದರು. ಆ ಬಳಿಕ ನಾನು ಬಿ.ಟೆಕ್​ ಪೂರ್ಣಗೊಳಿಸಿದೆ. ಆದರೆ, ನನಗೆ ಕೆಲಸ ಗಿಟ್ಟಿಸಿಕೊಳ್ಳುವುದೇ ಬಹುತ್ರಾಸದಾಯಕವಾಗಿತ್ತು, ಏಕೆಂದರೆ ಆ ವೇಳೆ ಏರೋನಾಟಿಕಲ್​ ಎಂಜಿನಿಯರಿಂಗ್​ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳು ಇರಲಿಲ್ಲ. ಕೇವಲ ಎಚ್​ಎಎಲ್​ ಮತ್ತು ಎನ್​ಎಎಲ್​ನಲ್ಲಿ ಮಾತ್ರ ಕೆಲಸದ ಅವಕಾಶಗಳು ಇದ್ದವು ಅಷ್ಟೇ. ನನಗೆ ಕೆಲಸ ಸಿಗದಿದ್ದಾಗ ನಾನು ಐಐಎಸ್​ಸಿ ಅಧ್ಯಯನ ಹೋಗಬೇಕಾಯಿತು.”

“ಆ ಬಳಿಕವೂ ನಾನು ಬಯಸಿದ್ದು ನನಗೆ ಸಿಗಲಿಲ್ಲ. ನಾನು ಸ್ಯಾಟಲೈಟ್​​ ಕೇಂದ್ರ ಸೇರಲು ಬಯಸಿದ್ದೆ. ಆದರೆ, ವಿಕ್ರಂ ಸಾರಾಬಾಯಿ ಕೇಂದ್ರಕ್ಕೆ ಸೇರಿಕೊಂಡೆ. ಅಲ್ಲೂ ಕೂಡ ನಾನು ಏರೋಡೈನಾಮಿಕ್​ ವಿಭಾಗಕ್ಕೆ ಸೇರಬೇಕು ಎಂದು ಬಯಸಿದ್ದೆ. ಆದರೆ, ಕೊನೆಗೆ ನಾನು ಪಿಎಸ್​ಎಲ್​ವಿ ಯೋಜನೆಗೆ ಸೇರಿಕೊಂಡೆ. ಎಲ್ಲ ಕಡೆಯಲ್ಲೂ ಅಷ್ಟೇ ನಾನು ಬಯಸಿದ್ದು ನನಗೆ ಸಿಗಲೇ ಇಲ್ಲ.” ಎಂದು ಅವರು ಹೇಳಿಕೊಂಡಿದ್ದರು.

Comments are closed.