
ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡಿದ್ದರಿಂದ ಕೂದಲೆಳೆ ಅಂತರದಲ್ಲಿ ಸೇಫ್ ಲ್ಯಾಂಡಿಂಗ್ ತಪ್ಪಿದೆ. ಈಗ ಮುಂದೇನು ಎಂಬ ಪ್ರಶ್ನೆ ಬರುವುದು ಸಹಜ.
ಲ್ಯಾಂಡರ್ ಚಂದ್ರನಲ್ಲಿ ಸರಿಯಾಗಿ ಇಳಿದಿಲ್ಲ ಎಂದರೆ ಇಡೀ ಯೋಜನೆಯೇ ಹಾಳಾಯಿತು ಎಂದರ್ಥವಲ್ಲ. ಚಂದ್ರನ ಹೊರಗಿನ ಕಕ್ಷೆಯಲ್ಲಿ ಉಪಗ್ರಹ ಸುತ್ತುತ್ತಿದ್ದು ಇನ್ನು 1 ವರ್ಷ ಅದರ ಆಯುಷ್ಯ ಇರಲಿದೆ. ಇದೇ ವೇಳೆ ಇಸ್ರೋ ಚಂದ್ರಯಾನ 2 ರ ಮುಂದಿನ ಹೆಜ್ಜೆಯ ಬಗ್ಗೆಯೂ ತೀರ್ಮಾನಿಸಲಿದೆ.
ವಿಕ್ರಂ ಲ್ಯಾಂಡಿಂಗ್ನಲ್ಲಿ ಆದ ಸಮಸ್ಯೆಯೇನು ಎಂಬುದನ್ನು ತಿಳಿಯಲು ಅದು ದತ್ತಾಂಶ ಸಂಗ್ರಹಣೆ ಮಾಡಲಿದೆ. ಶೇ.95ರಷ್ಟು ಯೋಜನೆ ಯಶಸ್ವಿಯಾಗಿರುವುದರಿಂದ ಮುಂದಿನ ಯೋಜನೆಗೆ ನೆರವು ಸಿಗಲಿದೆ.
ಇಸ್ರೋದ ಮಾಜಿ ನಿರ್ದೇಶಕ ಡಿ ಶಶಿಕುಮಾರ್ ಅವರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದಂತೆ ಲ್ಯಾಂಡರ್ ಮತ್ತು ಆರ್ಬಿಟರ್ (ಉಪಗ್ರಹ) ನಡುವೆ ಸಂಪರ್ಕ ಸರಿಯಾಗಿತ್ತು. ಆದರೆ ಸಂವಹನ ದತ್ತಾಂಶಗಳು ಸಿಗದಾಗಿವೆ. ಇದರಿಂದ ಕೊನೆಯ 15 ನಿಮಿಷದಲ್ಲಿ ಏನಾಯ್ತು ಎಂಬುದರ ಬಗ್ಗೆ ವಿಜ್ಞಾನಿಗಳು ಶೋಧ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ದೂರ ಬಾಹ್ಯಾಕಾಶ ಯಾನದಲ್ಲಿ, ಲ್ಯಾಂಡಿಂಗ್ ವೇಳೆ ಹೀಗಾಗದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.
Comments are closed.