
ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಮೊದಲಿನಿಂದಲೂ ಭಾರತ-ಪಾಕಿಸ್ತಾನ ವಿವಾದ ಇದ್ದರೂ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಅದಿನ್ನೂ ಹೆಚ್ಚಾಗಿದೆ. ಯುದ್ಧ ಸಾರುವ ಮಾತುಗಳನ್ನೂ ಆ ದೇಶ ವಟಗುಡುತ್ತಿದೆ. ವಿಶ್ವಸಂಸ್ಥೆಯವರೆಗೂ ಪಾಕ್ ದೂರು ನೀಡಿದ್ದರೂ ಬಹುತೇಕ ದೇಶಗಳು ಭಾರತವನ್ನೇ ಬೆಂಬಲಿಸಿವೆ. ಪಾಕ್ ಪ್ರಧಾನಿ ಸೇರಿ ಬಹುತೇಕರು ಭಾರತದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ.
ಹೀಗಿರುವಾಗ ಪಾಕ್ ರಾಜಕಾರಣಿಯೋರ್ವರು ಭಾರತದ ಪರವಾಗಿ ಮಾತನಾಡಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಭಾರತದ ಆಂತರಿಕ ವಿಚಾರ ಎಂದಿದ್ದಾರೆ.
#WATCH London: Founder of Pakistan’s Muttahida Qaumi Movement (MQM) party, Altaf Hussain sings 'Saare jahan se acha Hindustan hamara.' pic.twitter.com/4IQKYnJjfB
— ANI (@ANI) August 31, 2019
ಪಾಕಿಸ್ತಾನದ ಹಿರಿಯ ನಾಯಕ, ಮುತ್ತಾಹಿದ್ ಕೌಮಿ ಮೂವ್ಮೆಂಟ್ ರಾಜಕೀಯ ಪಕ್ಷದ ಸಂಸ್ಥಾಪಕ ಅಲ್ತಾಫ್ ಹುಸ್ಸೇನ್ ಅವರು ಭಾರತದ ಪರ ನಿಂತಿದ್ದಾರೆ. ಇನ್ನೂ ಒಂದು ಅಚ್ಚರಿಯ ಸಂಗತಿಯೆಂದರೆ ಅಲ್ತಾಫ್ ಅವರು ‘ಸಾರೇ ಜಹಾಂಸೆ ಅಚ್ಛಾ, ಹಿಂದುಸ್ತಾನ ಹಮಾರಾ’ ಗೀತೆಯನ್ನೂ ಹಾಡಿದ್ದಾರೆ. ಅವರು ಸಾರೇ ಜಹಾಂ ಸೆ ಅಚ್ಛಾ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿದೆ.
ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಹಾಡಿ ಬಳಿಕ ಕಾಶ್ಮೀರದ ವಿಚಾರವನ್ನೂ ಮಾತಾಡಿದ್ದಾರೆ ಎನ್ನಲಾಗಿದೆ.
ಆರ್ಟಿಕಲ್ 370 ರದ್ದುಗೊಳಿಸಿ ಆದೇಶ ಹೊರಡಿಸಿರುವ ಭಾರತ ಕೇಂದ್ರ ಸರ್ಕಾರದ ಕ್ರಮ ಅದರ ಆಂತರಿಕ ವಿಚಾರ. ಭಾರತದ ದೇಶದ ಜನರ ಬೆಂಬಲದಿಂದ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಪಾಕಿಸ್ತಾನ ಕಾಶ್ಮೀರಿ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರನ್ನು ಮೂಲೆಗುಂಪು ಮಾಡಿದ್ದು, ಆ ಜನರಿಗೆ ಪಾಕಿಸ್ತಾನದ ಧ್ವಜ ಒಪ್ಪಿಕೊಳ್ಳದೆ, ಜಮ್ಮುಕಾಶ್ಮೀರ ನಮಗೆ ಕೊಡಿ ಎನ್ನುವ ಪಾಕಿಸ್ತಾನಕ್ಕೆ ಬೆಂಬಲ ನೀಡದೆ ಬೇರೆ ಆಯ್ಕೆಯಿಲ್ಲದಂತೆ ಮಾಡಲಾಗಿದೆ ಎಂದು ಹುಸ್ಸೇನ್ ಹೇಳಿದ್ದಾರೆ.
ಮೊಹಜಿರ್, ಬಲೋಚ್ಸ್, ಗಿಲ್ಜಿಟ್ಸ್ ಸೇರಿ ಹಲವು ಅಲ್ಪಸಂಖ್ಯಾತ ಸಮುದಾಯದವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಅವರಿಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ. ನಿರ್ದಯವಾಗಿ ಹತ್ಯೆ ಮಾಡುತ್ತಿದೆ. ಅಲ್ಲಿರುವ ಇತರ ರಾಷ್ಟ್ರಗಳ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾಗಿ ವರದಿಯಾಗಿದೆ.
ಪಾಕಿಸ್ತಾನ ಮತ್ತು ಭಾರತ ಒಂದೇ ಬಾರಿಗೆ ಸ್ವಾತಂತ್ರ್ಯ ಪಡೆದಿವೆ. ಆದರೆ ಭಾರತ ಇಂದು ಆರ್ಥಿಕತೆಯಿಂದ ಹಿಡಿದು ತಂತ್ರಜ್ಞಾನದವರೆಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ. ಸಾಧನೆಯನ್ನು ಮಾಡುತ್ತಿದೆ. ಕಾರಣ ಭಾರತದಲ್ಲಿ ಊಳಿಗಮಾನ್ಯ ಪದ್ಧತಿಯನ್ನು ತೊಡೆದುಹಾಕಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ಮತ್ತು ಈ ಹೊಲಸು ಊಳಿಗಮಾನ್ಯ ಪದ್ಧತಿ ಹಾಗೇ ಇದೆ ಎಂದಿದ್ದಾರೆ ಎನ್ನಲಾಗಿದೆ.
Comments are closed.