ಕರ್ನಾಟಕ

ದಿಲ್ಲಿಯ ಜಾರಿ ನಿರ್ದೆಶನಾಲಯದ ಕಚೇರಿಯಲ್ಲಿ ಡಿಕೆಶಿವಕುಮಾರ್ ವಿಚಾರಣೆ ಆರಂಭ

Pinterest LinkedIn Tumblr


ನವದೆಹಲಿ: ಸಮನ್ಸ್​ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ನೆನ್ನೆ ಹೈಕೋರ್ಟ್​ನಲ್ಲಿ ವಜಾಗೊಂಡ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​ನ ಪ್ರಭಾವಿ ನಾಯಕ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

ಸಂಜೆ ಐದು ಗಂಟೆಗೆ ದೆಹಲಿಗೆ ಬಂದಿಳಿದ ಡಿಕೆಶಿ ವಿಮಾನ ನಿಲ್ದಾಣದಿಂದ ನೇರವಾಗಿ ಕರ್ನಾಟಕ ಭವನಕ್ಕೆ ತೆರಳಿದರು. ಅಲ್ಲಿ 302 ನಂಬರ್ ಕೊಠಡಿ ಬುಕ್​ ಮಾಡಿದ ಅವರು ರೂಂ ಒಳಗೂ ತೆರಳದೆ ನೇರ ಇ.ಡಿ. ಕಚೇರಿಗೆ ತೆರಳಿದರು.

ಜಾರಿ ನಿರ್ದೇಶನಾಲಯದ ಜಂಟಿ ಆಯುಕ್ತೆ ಮೋನಿಕಾ ಶರ್ಮಾ ನೇತೃತ್ವದ ಐವರನ್ನು ಒಳಗೊಂಡ ತಂಡ ಡಿಕೆಶಿಯನ್ನು ವಿಚಾರಣೆ ನಡೆಸುತ್ತಿದೆ.

ಕಳೆದ ವರ್ಷ ದೆಹಲಿಯ ಡಿಕೆಶಿ ನಿವಾಸದಲ್ಲಿ ಪತ್ತೆಯಾದ 8.6 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿತ್ತು. ಆದರೆ, ಈ ಸಮನ್ಸ್​ ಅನ್ನು ರದ್ದು ಮಾಡಬೇಕು ಎಂದು ಕೋರಿ ಡಿಕೆಶಿ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ಪರ ಕಪಿಲ್​ ಸಿಬಾಲ್​ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಈ ಪ್ರಕರಣ ಇ.ಡಿ. ವಿಚಾರಣೆಗೆ ಅರ್ಹವಾಗಿದೆ ಎಂದು ಹೇಳಿ ಡಿಕೆಶಿ ಅರ್ಜಿಯನ್ನು ವಜಾಗೊಳಿಸಿತ್ತು.

ಅರ್ಜಿ ವಜಾಗೊಂಡ ಬೆನ್ನಲ್ಲೇ ಡಿಕೆಶಿ ಅವರಿಗೆ ಇ.ಡಿ. ಮತ್ತೊಂದು ಸಮನ್ಸ್​ ಜಾರಿ ಮಾಡಿತು. ನೆನ್ನೆ ರಾತ್ರಿ ಇ.ಡಿ.ಅಧಿಕಾರಿಗಳು ಡಿಕೆಶಿ ನಿವಾಸಕ್ಕೆ ತೆರಳಿ, ಇಂದು ವಿಚಾರಣೆಗೆ ಹಾಜರಾಗುವಂತೆ ಹೇಳಿ, ಸಮನ್ಸ್​ ನೀಡಿದ್ದರು. ಹೀಗಾಗಿ ಇಂದು ಮಧ್ಯಾಹ್ನ ಬೆಂಗಳೂರಿನಿಂದ ದೆಹಲಿಗೆ ತೆರಳಿದ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ.

Comments are closed.