ಉಡುಪಿ: ಗಂಗೊಳ್ಳಿ ಬಿಜೆಪಿ ಮುಖಂಡರ ನಿಯೋಗ ರಾಜ್ಯದ ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಸರ್ಕ್ಯೂಟ್ ಹೌಸ್ನಲ್ಲಿ ಗುರುವಾರ ಭೇಟಿ ಮಾಡಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಮತ್ತು ಗಂಗೊಳ್ಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನವಿ ಸಲ್ಲಿಸಿದರು.

ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಸ್ಲ್ಯಾಬ್ ಕುಸಿತ, ಬಂದರು ಅಭಿವೃದ್ಧಿ ಹಾಗೂ ಗಂಗೊಳ್ಳಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸಚಿವರ ಗಮನ ಸೆಳೆದ ಗಂಗೊಳ್ಳಿ ಬಿಜೆಪಿ ಮುಖಂಡರ ನಿಯೋಗ, ಆದಷ್ಟು ಶೀಘ್ರ ಬಂದರಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಮನವಿ ಮಾಡಿ, ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.
ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು, ಅಧಿಕಾರಿಗಳೊಂದಿಗೆ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಶಾಸಕರ ಜೊತೆಗೂಡಿ ಮಾಡಲಾಗುವುದು ಅಲ್ಲದೆ ಗಂಗೊಳ್ಳಿಯ ಅಭಿವೃದ್ಧಿ ಬಗ್ಗೆ ಸರಕಾರದಿಂದ ಅಗತ್ಯ ಅನುದಾನವನ್ನು ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಗ್ರಾಪಂ ಸದಸ್ಯ ಬಿ.ರಾಘವೇಂದ್ರ ಪೈ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಬಿಜೆಪಿ ಮುಖಂಡರಾದ ಉಮನಾಥ ದೇವಾಡಿಗ, ರಾಮಪ್ಪ ಖಾರ್ವಿ, ಚಂದ್ರ ಖಾರ್ವಿ, ಮಹೇಶಕುಂದಾಪುರ, ಗಣೇಶ ಕಿಣಿ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ತಾಪಂ ಸದಸ್ಯ ಕರಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Comments are closed.