ಕರಾವಳಿ

ಭಾರೀ ಮಳೆಗೆ ಕುಲಶೇಖರ ಬಳಿ ರೈಲು ಹಳಿಯ ಮೇಲೆ ಗುಡ್ಡ ಕುಸಿತ : ಮಂಗಳೂರು-ಗೋವಾ-ಮುಂಬೈ ಮಧ್ಯೆ ರೈಲು ಸಂಪರ್ಕ ಕಡಿತ

Pinterest LinkedIn Tumblr

ಮಂಗಳೂರು, ಆಗಸ್ಟ್.23: ಕರಾವಳಿ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುಲಶೇಖರ ಬಳಿ ಗುಡ್ಡ ಕುಸಿದು ರೈಲು ಹಳಿಯ ಮೇಲೆ ಮಣ್ಣು ಬಿದ್ದ ಪರಿಣಾಮ ಈ ಮಾರ್ಗವಾಗಿ ಸಂಚಾರಿಸುವ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಂಗಳೂರು ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಅಲ್ಲಲ್ಲಿ ಧರೆ ಕುಸಿತ ಪ್ರಕರಣಗಳು ಮುಂದುವರಿದಿದ್ದು, ಇದೀಗ ಕುಲಶೇಖರ ಬಳಿ ಮಂಗಳೂರು-ಗೋವಾ-ಮುಂಬೈ ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಹಳಿಯ ಮೇಲೆ ಮಣ್ಣು ಕುಸಿದ ಬಿದ್ದ ಪರಿಣಾಮ ಶುಕ್ರವಾರ ಹಲವು ರೈಲುಗಳ ಯಾನವನ್ನು ರದ್ದು ಮಾಡಲಾಗಿದೆ.

ಇತ್ತೀಚಿಗೆ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುಲಶೇಖರ ಬಳಿ ಗುಡ್ಡ ಕುಸಿದಿದೆ. ಕುಲಶೇಖರದಲ್ಲಿ ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕುಲಶೇಖರ-ಪಡೀಲ್ ರೈಲ್ವೆ ಸುರಂಗ ಮಾರ್ಗದ ಸನಿಹವೇ ಈ ಘಟನೆ ನಡೆದಿದೆ. ಇದೀಗ ಈ ಮಾರ್ಗವಾಗಿ ಸಂಚರಿಸುವ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

ಇದೇ ವೇಳೆ ಮಂಗಳೂರಿನಿಂದ ಗೋವಾ-ಮುಂಬೈ ಮಧ್ಯೆ ಓಡಾಡುವ ರೈಲುಗಳ ಯಾನವನ್ನು ರದ್ದುಗೊಳಿಸಲಾಗಿದೆ. ಗೋವಾ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ತೋಕೂರು ಬಳಿ ನಿಲುಗಡೆಯಾದರೆ, ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಜೋಕಟ್ಟೆಯಲ್ಲಿ ನಿಂತಿವೆ. ಮುಂಬೈಯಿಂದ ಬಂದ ಮತ್ಯಗಂಧ ರೈಲು ಸುರತ್ಕಲ್ ಬಳಿ ನಿಂತಿವೆ.

ಈ ನಡುವೆ ಗೋವಾ-ಮಂಗಳೂರು ಇಂಟರ್‌ಸಿಟಿ ರೈಲು ಮತ್ತು ಮಂಗಳೂರು-ಗೋವಾ ಪ್ಯಾಸೆಂಜರ್ ರೈಲು ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೇ ನಿಲ್ದಾಣದಿಂದ ವಾಪಾಸ್ ಆಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ಈ ಹಳಿಯ ಮೂಲಕ ಚಲಿಸುವ ಎಲ್ಲಾ ರೈಲುಗಳ ಯಾನವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹಳಿಯಲ್ಲಿದ್ದ ಮಣ್ಣು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ ಇಲಾಖೆ ಮಾಡುತ್ತಿದ್ದು, ಜೆಸಿಬಿ ಬಳಸಿ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿವೆ.

Comments are closed.