
ಮಂಗಳೂರು / ಉಳ್ಳಾಲ, ಆಗಸ್ಟ್.10: ಉಳ್ಳಾಲ – ತೊಕ್ಕೊಟ್ಟು ನೇತ್ರಾವತಿ ಸೇತುವೆ ಮೇಲಿನಿಂದ ನಿನ್ನೆ ಸಂಜೆ ನದಿಗೆ ಹಾರಿದ್ದಾರೆ ಎನ್ನಲಾದ ಯುವತಿಯ ಶವ ಶನಿವಾರ ಮುಂಜಾನೆ ಸೋಮೇಶ್ವರ ಸಮೀಪದ ಬಟ್ಟಪ್ಪಾಡಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಮೃತ ಯುವತಿಯನ್ನು ಪುತ್ತೂರು ಬಡಗನ್ನೂರು ಕೋಡಿಯಡ್ಕ ನಿವಾಸಿ ಗಜನೀಶ್ವರಿ ಕೆ.(24) ಎಂದು ಗುರುತಿಸಲಾಗಿದೆ.ಈಕೆ ನಗರದ ಪ್ಲೈವುಡ್ ಕಂಪೆನಿಯ ಉದ್ಯೋಗಿ ಎಂದು ಹೇಳಲಾಗಿದೆ.
ಯುವತಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಉಳ್ಳಾಲ – ತೊಕ್ಕೊಟಿನ ಸೇತುವೆ ಬಳಿ ನಾಪತ್ತೆಯಾಗಿದ್ದು, ಸೇತುವೆ ಮೇಲೆ ಯುವತಿಯ ಬ್ಯಾಗ್, ಮೊಬೈಲ್ ಫೋನ್, ಐಡಿ ಕಾರ್ಡ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯುವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು.
ಈ ಮಧ್ಯೆ ಈಕೆ ಸೇತುವೆ ಬಳಿ ತನ್ನ ಬ್ಯಾಗ್, ಮೊಬೈಲ್ ಫೋನ್, ಐಡಿ ಕಾರ್ಡ್ ಇಟ್ಟು ಹಾರಿದ್ದನ್ನು ತಾನು ನೋಡಿರುವುದಾಗಿ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಬಳಿಕ ಅಕೆಯ ಗುರುತು ಪತ್ತೆಗಾಗಿ ಆಕೆಯ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದರು.
ಡೆಂಜರ್ ಝೋನ್ :
ಜುಲೈ 29ರಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ ಕೃಷ್ಣರ ಅಳಿಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಬಹುಕೋಟಿ ಉದ್ಯಮಿ ಸಿದ್ಧಾರ್ಥ ಅವರು ನೇತ್ರಾವತಿ ನದಿಗೆ ಹಾರಿದ್ದು, ಬಳಿಕ ಜುಲೈ 31ರಂದು ಮುಂಜಾನೆ ಅವರ ಮೃತದೇಹವು ನಗರದ ಹೈಗೆ ಬಜಾರ್ ಸಮೀಪದ ಐಸ್ ಪ್ಲಾಂಟ್ ಬಳಿ ಪತ್ತೆಯಾಗಿತ್ತು. ಈ ಘಟನೆ ದೇಶ ವಿದೇಶಗಳಲ್ಲಿ ಸಂಚಾಲನ ಮೂಡಿಸಿತ್ತು.
ಈ ಘಟನೆಯ ಬಳಿಕ ಆಗಸ್ಟ್ 4ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಎಂಬವರು ಇದೇ ನೇತ್ರಾವತಿ ಸೇತುವೆ ಮೇಲಿನಿಂದ ನದಿಗೆ ಹಾರಿದ್ದು, ಬಳಿಕ ಕೊನೆಯ ಕ್ಷಣದಲ್ಲಿ ತನ್ನ ಹೆಂಡತಿ-ಮಕ್ಕಳ ನೆನಪಾಗಿ ತನ್ನ ನಿರ್ಧಾರ ಬದಲಿಸಿ ಈಜಿ ದಡ ಸೇರಿದ್ದು, ಈ ವೇಳೆ ಸ್ಥಳೀಯರು ಅವರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಇದೇ ವೇಳೆ ಈ ಸ್ಥಳ ತುಂಬಾ ಅಪಾಯಕಾರಿಯಾಗಿದ್ದು, ಇದೇ ಸೇತುವೆ ಮೇಲಿನಿಂದ ಹಲವಾರು ಮಂದಿ ಹಾರಿ ಆತ್ಮಹತ್ಯೆಗೆ ಶರಣಗಿರುವುದರಿಂದ ಈ ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
Comments are closed.