
ಇಡೀ ನಾಡಿನ ಜನತೆ ವರಲಕ್ಷ್ಮಿಯ ಕೃಪಾಕಟಾಕ್ಷವನ್ನು ಬಯಸಿದರೆ. ಸಾಲು ಸಾಲು ರಜೆಯ ಹೂರಣವನ್ನು ಹೊತ್ತ ಸಿನಿ ಪ್ರೇಕ್ಷಕರಿಗಂತೂ ಮಹಾಭಾರತದ ಕ್ಯಾರೆಕ್ಟರದ್ದೇ ಕನವರಿಕೆ. ಹತ್ತಾರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರೋ ಕುರುಕ್ಷೇತ್ರ ಸಿನಿಮಾ ಇಂದು ನೂರಾರು ಚಿತ್ರಮಂದಿರಕ್ಕೆ ಬಂದಪ್ಪಳಿಸಿದೆ.
ನಟ ದರ್ಶನ್ ಅಭಿಮಾನಿಗಳಿಗಂತೂ ಕಂಡರಿಯದಷ್ಟು ಜೋಷ್ ನಲ್ಲಿದ್ದಾರೆ. ಡಿ ಬಾಸ್ ದುರ್ಯೋಧನನಾಗಿ ನಟಿಸಿರೋ ಕುರುಕ್ಷೇತ್ರ ಸಿನಿಮಾವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್, ಸೋನುಸೂದ್ ರ ಅಭಿನಯ ತ್ರಿಡಿಯ ತ್ರಿಲ್ಲನ್ನ ಪ್ರೇಕ್ಷರಿಗೆ ಉಣಬಡಿಸಿರೋದಂತೂ ಸತ್ಯ.
ನಿನ್ನೆ ತಡರಾತ್ರಿ ಬೆಂಗಳೂರಿನ ಮಂತ್ರಿಮಾಲ್ನಲ್ಲಿ ಕುರುಕ್ಷೇತ್ರ ಪ್ರೀಮಿಯರ್ ಶೋವನ್ನು ಪ್ರದರ್ಶಿಸಲಾಗಿತ್ತು. ಸಿನಿಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಿನಿಮಾವನ್ನು ರಸವತ್ತಾಗಿ ಎಂಜಾಯ್ ಮಾಡಿದರು. ನಟ ದರ್ಶನ್, ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್, ದೊಡ್ಡಣ್ಣ ಕುರುಕ್ಷೇತ್ರ ಸಿನಿಮಾವನ್ನು ವೀಕ್ಷಣೆ ಮಾಡಿದರು.
ರಾತ್ರಿ 9:30 ಕ್ಕೆ ವಿಶೇಷ ಪ್ರದರ್ಶನ ಕಂಡ ಕುರುಕ್ಷೇತ್ರ ಸಿನಿಮಾವನ್ನು ಸ್ವತಃ ವೀಕ್ಷಿಸಿ ಮಾತನಾಡಿದ ಸುಮಲತಾ ಕುರುಕ್ಷೇತ್ರ ಸಿನಮಾ ಅನ್ನೋದು ಅನುಭವ ಮತ್ತು ಜರ್ನಿಯಿಂದ ಕೂಡಿರೋ ಫಿಲ್ಮ್. ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ಆದ್ಮೇಲೆ ಇದೊಂದು ಮೈಲಿಗಲ್ಲು. ದುರ್ಯೋಧನನ ಪಾತ್ರಕ್ಕೆ ತಕ್ಕನಾಗಿ ದರ್ಶನ್ ನಟಿಸಿದ್ದಾರೆ. ಕರ್ನಾಟಕದ ಜನ 100 ವರ್ಷ ನೆನಪಿಸಿಕೊಳ್ಳೋ ಸಿನಿಮಾ ಅಂತಾನೇ ವಿಧವಿಧವಾಗಿ ಬಣ್ಣಿಸಿದರು
ಇನ್ನು ಚಿತ್ರ ವೀಕ್ಷಣೆಯ ಬಳಿಕ ದರ್ಶನ್ ಮಾತನಾಡಿ ಚಿತ್ರ ಇನ್ನೆನು ತೆರೆಕಾಣುತ್ತೆ. ಎಲ್ಲರೂ ಸಿನಿಮಾ ನೋಡಿದ್ಮೇಲೆ ನಾನು ಮಾತನಾಡುತ್ತೇನೆ. ಅಂಬರೀಶ್ ಜೊತೆ ಮೊದಲ ಮತ್ತು ಕೊನೆಯ ಚಿತ್ರದಲ್ಲಿ ನಟಿಸೋ ಭಾಗ್ಯ ನನಗೆ ಸಿಕ್ಕಿದೆ. ಮಹಾಭಾರತ ಎಲ್ಲರಿಗೂ ತಿಳಿಬೇಕು ಅಂದರೆ ಎಲ್ಲಾ ಕುರುಕ್ಷೇತ್ರ ಸಿನಿಮಾ ನೋಡಿ ಅಂತ ಬಹಳ ಉತ್ಸುಕವಾಗಿಯೇ ದರ್ಶನ್ ಮಾತನಾಡಿದರು.
ಇನ್ನು ಬೆಳ್ಳಂಬೆಳಿಗ್ಗೆನೇ ಥಿಯೇಟರ್ ಮುಂದೆ ಜಮಾಯಿಸಿದ್ದ ಜನರನ್ನು ನೋಡಿದರೆ ಹಬ್ಬ ಮನೆಯಲ್ಲೋ ಅಥವಾ ಥಿಯೇಟರ್ ನಲ್ಲೋ ಅನ್ನೋ ಅನುಮಾನ ಕಾಡಿತ್ತು. ಅಷ್ಟರ ಮಟ್ಟಿಗೆ ದರ್ಶನ್ ಅಭಿಮಾನಿಗಳು ಥಿಯೇಟರ್ ನ ಇಕ್ಕೆಲಗಳಲ್ಲಿ ತುಂಬಿದರು. ಮೊದಲ ದಿನವೇ ತಮ್ಮ ಅಚ್ಚುಮೆಚ್ಚಿನ ನಟ ದರ್ಶನ್ ರ ಸಿನಿಮಾವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಆತುರ ಕಾತುರದಿಂದರು. ಅದೇ ರೀತಿ ಸಿನಿಮಾ ನೋಡಿ ಹೊರ ಬಂದಾಗ್ಲೂ ಅಭಿಮಾನಿಗಳಲ್ಲಿ ಅದೇ ಜೋಷ್ ಕಂಡುಬಂತು.
Comments are closed.