
ಬೆಂಗಳೂರು: ಮೂವರು ಅತೃಪ್ತರನ್ನು ಅನರ್ಹಗೊಳಿಸಿರುವ ಹಾಗೂ ಸೋಮವಾರ ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಅತೃಪ್ತ ಶಾಸಕರು ಇಂದು ತಮಗೆ ಕರೆ ಮಾಡಿದ್ದರು ಎಂದು ಹೇಳುವ ಮೂಲಕ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಬಾಗವಹಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, “ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಸ್ಪೀಕರ್ ಅನರ್ಹಗೊಳಿಸಿರುವ ಹಿನ್ನೆಲೆ ಅತೃಪ್ತ ಶಾಸಕರು ಭಯಗೊಂಡಿದ್ದಾರೆ. ಹೀಗಾಗಿ ಅವರು ನನಗೆ ಕರೆ ಮಾಡಿದ್ದು ನಿಜ. ಆದರೆ, ನಾನು ಬೇಕೆಂದೆ ಅವರ ಕರೆಯನ್ನು ಸ್ವೀಕರಿಸಿರಲಿಲ್ಲ. ಮೈತ್ರಿ ಸರ್ಕಾರ ಬೀಳಲು ಅತೃಪ್ತರೇ ಕಾರಣ. ಅವರು ಬಂದಿದ್ರೆ ಸರ್ಕಾರ ಬೀಳುತ್ತಿರಲಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಕುದುರೆ ವ್ಯಾಪಾರ ನಡೆದಿರುವುದು ನಿಜ” ಎಂದು ಅವರು ಕಿಡಿಕಾರಿದ್ದಾರೆ.
ಇದೇ ವಿಚಾರದ ಕುರಿತಾಗಿ ವಿಜಯಪುರದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್, “ಅತೃಪ್ತರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದು ನಿಜ. ಆದರೆ, ಸಿದ್ದರಾಮಯ್ಯ ಅವರ ಕರೆಯನ್ನು ಸ್ವೀಕರಿಸಿಲ್ಲ” ಎಂದು ಹೇಳುವ ಮೂಲಕ ಮೂವರನ್ನು ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರದಿಂದ ಅತೃಪ್ತರು ಭಯಗೊಂಡಿದ್ದಾರೆ. ಅಲ್ಲದೆ, ಮತ್ತೆ ಕಾಂಗ್ರೆಸ್ಗೆ ಮರಳಲು ಹಾತೊರೆಯುತ್ತಿದ್ದಾರೆ ಎಂಬ ವಿಚಾರಕ್ಕೆ ಪುಷ್ಠಿ ನೀಡಿದ್ದಾರೆ.
ಒಂದು ವೇಳೆ ಸೋಮವಾರದ ಅಧಿವೇಶನದ ಒಳಗಾಗಿ ಅತೃಪ್ತರು ಮನಸ್ಸು ಬದಲಿಸಿ ಕಾಂಗ್ರೆಸ್ ಪಕ್ಷಕ್ಕೆ ವಾಪಾಸ್ ಬಂದರೆ, ತಮ್ಮ ರಾಜೀನಾಮೆಯನ್ನು ಹಿಂಪಡೆದರೆ ಶುಕ್ರವಾರ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಮತ್ತೊಮ್ಮೆ 3 ದಿನದ ಸಿಎಂ ಎಂಬ ಅಪಖ್ಯಾತಿಗೆ ಒಳಗಾಗುವುದು ಖಚಿತವಾಗಲಿದೆ.
10 ಶೆಡ್ಯೂಲ್ ಬಗ್ಗೆ ಗಮನ ಸೆಳೆದಿರುವ ಎಂ.ಬಿ. ಪಾಟೀಲ್, “ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ. ಆದರೆ, ಅತೃಪ್ತರಿಗೆ ಝೀರೋ ಟ್ರಾಫಿಕ್ ನೀಡಲು ಹೇಗೆ ಸಾಧ್ಯ. ಇಂತಹ ಪಕ್ಷಾಂತರ ಮಾಡುವವರು, ಪಕ್ಷಕ್ಕೆ ದ್ರೋಹ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಈ ಹಿನ್ನೆಲೆಯಲ್ಲಿ 10 ಶೆಡ್ಯೂಲ್ ಕಾಯ್ದೆಗೆ ತಿದ್ದುಪಡಿಯಾಗಬೇಕಿದೆ. ಅನರ್ಹ ಶಾಸಕರ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಬೇಕಿದೆ ಎಂದು ಒತ್ತಾಯಿಸಿದ್ದಾರೆ.
Comments are closed.