
ಬಹುಜನ ಸಮಾಜವಾದಿ ಪಕ್ಷದ ಕರ್ನಾಟಕದ ಏಕೈಕ ಶಾಸಕ ಎನ್ ಮಹೇಶ್ರನ್ನು ಪಕ್ಷದಿಂದ ಅಮಾನತ್ತುಗೊಳಿಸಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆದೇಶಿಸಿದ್ಧಾರೆ. ವಿಶ್ವಾಸಮತ ಯಾಚನೆ ವೇಳೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮಾಯಾವತಿ ಎನ್ ಮಹೇಶ್ಗೆ ಸ್ಪಷ್ಟ ಸೂಚನೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಮಾಯಾವತಿ ಸ್ಪಷ್ಟಪಡಿಸಿದ್ದರು.
ಪಕ್ಷದ ವಿರಷ್ಠೆಯ ಸೂಚನೆಯನ್ನೂ ಮೀರಿ ಎನ್ ಮಹೇಶ್ ಸದನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ತೆಗೆದುಕೊಂಡಿರುವ ಮಾಯಾವತಿ, ಮಹೇಶ್ರ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಯಾವತಿ ಮಾಹಿತಿ ನೀಡಿದ್ದು, ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಸದನಕ್ಕೆ ಗೈರಾದ ಮಹೇಶ್ರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಹೇಳಿದ್ದಾರೆ.
ಸಮಾಜವಾದಿ ಹಿನ್ನೆಲೆಯಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಎನ್ ಮಹೇಶ್, ಹಿಂದುತ್ವದ ಪ್ರತಿಪಾದಕರೆಂದೇ ಕರೆಸಿಕೊಳ್ಳುವ ಬಿಜೆಪಿಗೆ ಬೆಂಬಲ ನೀಡಿರುವುದು ಸಾಮಾಜಿಕವಾಗಿ ಖಂಡನೆಗೆ ಗುರಿಯಾಗುತ್ತಿದೆ. ತಾವು ನಂಬಿದ ಆದರ್ಶ, ಸಿದ್ಧಾಂತಗಳನ್ನು ಹಣದ ಆಮಿಶ ಅಥವಾ ಸೂಕ್ತ ಸ್ಥಾನಮಾನಕ್ಕಾಗಿ ಮಹೇಶ್ ತ್ಯಾಗ ಮಾಡಿದರೇ ಎಂಬ ಮಾತುಗಳೂ ಕೇಳಿ ಬರುತ್ತಿದೆ.
Comments are closed.