
ಮೈತ್ರಿ ಸರ್ಕಾರದ ಅಸ್ಥಿರತೆಗೆ ಹಾಗೂ ಶಾಸಕರು, ಸಚಿವರ ಅಸಮಧಾನಕ್ಕೆ ಸಚಿವ ರೇವಣ್ಣ ಅವರ ವರ್ತನೆ ಹಾಗೂ ಅವರ ಹಸ್ತಕ್ಷೇಪವೇ ಕಾರಣ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಸಚಿವ ರೇವಣ್ಣ ಸುದ್ದಿಗೋಷ್ಠಿ ನಡೆಸಿದ್ದು, ನಾನು ಯಾವ ತಪ್ಪು ಮಾಡಿಲ್ಲ. ದೋಸ್ತಿ ಅಸ್ಥಿರತೆಗೆ ನಾನು ಕಾರಣ ಅಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಡಿ.ರೇವಣ್ಣ, ದೋಸ್ತಿ ಸರ್ಕಾರಕ್ಕೆ ನನ್ನಿಂದ ಕಂಟಕ ಎಂಬ ಆರೋಪದಲ್ಲಿ ಹುರುಳಿಲ್ಲ. ಎಲ್ಲ ಇಲಾಖೆಗಳಿಗೂ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ನಾನಂತೂ ನನ್ನ ಇಲಾಖೆ ಹೊರತುಪಡಿಸಿ ಬೇರಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಮೊದಲು ಈ ಬಗ್ಗೆ ಏನು ಮಾತನಾಡದ ಅತೃಪ್ತರು ಮುಂಬೈ ಸೇರಿದ ಮೇಲೆ ನನ್ನ ಮೇಲೆ ಈ ರೀತಿ ಆರೋಪ ಹೊರಿಸುತ್ತಾರೆ ಎಂಬುದರ ಅರಿವಿಲ್ಲ ಎಂದು ರೇವಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಾನು ವರ್ಗಾವಣೆಗಾಗಿ 500 ಕೋಟಿ ಪಡೆದಿದ್ದೇನೆ ಎಂಬ ಆರೋಪಗಳೆಲ್ಲ ಸುಳ್ಳು. ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ.ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಅತೃಪ್ತರು, ರಾಜೀನಾಮೆ ಇವೆಲ್ಲ ನನಗೆ ಸಂಬಂಧಿಸಿದ ವಿಚಾರವಲ್ಲ. ಇದನ್ನು ನೋಡಿಕೊಳ್ಳಲು ಸ್ಪೀಕರ್ ಇದ್ದಾರೆ.
ಆದರೆ ಸರ್ಕಾರ ಅಸ್ಥಿರಗೊಳ್ಳಲು ನಾನು ಕಾರಣ ಎಂಬ ಮಾತು ಸುಳ್ಳು. ಸರ್ಕಾರ ಸುಭದ್ರವಾಗಿದೆ. ಸಿಎಂ ಅತೃಪ್ತರ ಮನವೊಲಿಸುತ್ತಾರೆ ಎಂದರು. ಅಲ್ಲದೇ, ಈ ಬೆಳವಣಿಗೆಗಳಿಂದ ನಮ್ಮ ಕುಟುಂಬದಲ್ಲಿ ಏನಾದ್ರೂ ಗಲಾಟೆಯಾಗಬಹುದೆಂದು ಯಾರಾದ್ರೂ ಅಂದಾಜಿಸಿದ್ದರೆ ಅದು ತಪ್ಪು, ನಾನು ಎಂದಿಗೂ ತಂದೆ ದೇವೆಗೌಡರು ಹಾಗೂ ಸಹೋದರ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಭದ್ಧವಾಗಿದ್ದೇನೆ ಎಂದರು.
Comments are closed.