
ಬೆಂಗಳೂರು(ಜುಲೈ 15): ನಿನ್ನೆಯವರೆಗೂ ಅತೃಪ್ತರನ್ನು ಓಲೈಸಲು ಹಾಗೂ ತನ್ನ ಪಕ್ಷದ ಶಾಸಕರನ್ನೂ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ತೋರುತ್ತಿದ್ದ ಆಸೆ ಇದೀಗ ಕಮರಿಹೋಗುತ್ತಿದೆಯಾ? ಇವತ್ತು ವಿಧಾನಸೌದಿಂದ ತನ್ನ ಶಾಸಕರನ್ನು ತಾಜ್ ವಿವಂತ್ ಹೋಟೆಲ್ಗೆ ವಾಪಸ್ ಕರೆದುಕೊಂಡು ಹೋಗಲು ಯಾವ ಕಾಂಗ್ರೆಸ್ ನಾಯಕರೂ ಆಸಕ್ತಿ ತೋರಿಲ್ಲ. ಶಾಸಕರನ್ನು ಕರೆದೊಯ್ಯಲು ಎರಡು ಬಸ್ ಇದ್ದರೂ ಅದರಲ್ಲಿದ್ದದ್ದು ಕೇವಲ 4 ಶಾಸಕರು ಮಾತ್ರ.
ಉಳಿದ ಶಾಸಕರು ಬೇರೆ ಬೇರೆ ಕಾರಣ ಹೇಳಿ ಬಸ್ ಹತ್ತಲಿಲ್ಲ. ಕೆಲವರು ತಾನು ಕಾರಿನಲ್ಲಿ ಬರುವುದಾಗಿ ಹೇಳಿದರೆ, ಮತ್ತೆ ಕೆಲಸವರು ಊರಿಗೆ ಹೋಗಿ ಬರುವುದಾಗಿ ಕಾರಣ ಹೇಳಿ ಹೊರಟಿದ್ದಾರೆ.
ಇವತ್ತು ತಾಜ್ ವಿವಂತ್ ಹೋಟೆಲ್ನಲ್ಲಿ ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಕೈ ಶಾಸಕರ ಸಭೆ ಕರೆದಿದ್ದಾರೆ. ಆದರೆ, ಹೋಟೆಲ್ನಲ್ಲಿ ಅನಿಲ್ ಚಿಕ್ಕಮಾದು ಹೊರತುಪಡಿಸಿ ಬೇರೆ ಯಾವ ಶಾಸಕರೂ ಕಾಣುತ್ತಿಲ್ಲ. ತಮ್ಮ ಶಾಸಕರ ಅನುಪಸ್ಥಿತಿ ಬಗ್ಗೆ ಕಾಂಗ್ರೆಸ್ ನಾಯಕರೂ ತಲೆ ಕೆಡಿಸಿಕೊಂಡಂತಿಲ್ಲ.
ಈ ಬೆಳವಣಿಗೆಯು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಕೈ ಪಕ್ಷ ಸಂಪೂರ್ಣ ಕೈಬಿಟ್ಟಿತೆ ಎಂಬ ಅನುಮಾನ ಹುಟ್ಟಿಸುವಂತಿದೆ. ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಗೆ ಗುರುವಾರದವರೆಗೂ ಸಮಯಾವಕಾಶ ಸಿಕ್ಕಿರುವುದರಿಂದ ಮೈತ್ರಿಪಾಳಯ ತನ್ನ ಸರ್ಕಾರ ಉಳಿಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಅನುಸರಿಸಬಹುದೆಂಬ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಮೈತ್ರಿಪಾಳಯ ತನ್ನ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ತೋರಿಸುತ್ತಿರುವ ನಿರಾಸಕ್ತಿ ಅಚ್ಚರಿ ಮೂಡಿಸಿದೆ.
ಅತ್ತ, ಕೇಸರಿಪಾಳಯ ಬಹಳ ಆತ್ಮವಿಶ್ವಾಸದಿಂದ ಬೀಗುತ್ತಿದೆ. ವಿಶ್ವಾಸಮತ ಯಾಚನೆ ಗುರುವಾರವೇ ನಡೆಯಲಿ ಯಾವತ್ತೇ ನಡೆಯಲಿ ಸರ್ಕಾರದ ಪತನ ಶತಃಸಿದ್ಧ ಎಂದು ಕೆಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ರಾಜೀನಾಮೆ ನೀಡಿದ 16 ಶಾಸಕರ ಪೈಕಿ 15 ಶಾಸಕರು ಸ್ಪೀಕರ್ ಅವರಿಂದ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಅರ್ಜಿಗಳ ವಿಚಾರಣೆ ನಾಳೆ ಮಂಗಳವಾರ ನಡೆಯಲಿದೆ. ಸುಪ್ರೀಂ ಕೋರ್ಟ್ನಲ್ಲಿ ವ್ಯತಿರಿಕ್ತ ತೀರ್ಪು ಬಂದರೂ ರಾಜ್ಯಪಾಲರ ಅಂಗಳದಲ್ಲಿ ಪ್ರಕರಣವನ್ನು ದಾಟಿಸಲು ಬಿಜೆಪಿ ಅಣಿಯಾಗಿದೆ. ಬಂಡಾಯದ ಈ ಮಹಾಯುದ್ಧದಲ್ಲಿ ಬಿಜೆಪಿ ತನ್ನ 6ನೇ ಪ್ರಯತ್ನದಲ್ಲಿ ಯಶಸ್ವಿಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
Comments are closed.