
ಬೆಂಗಳೂರು(ಜುಲೈ 15): ರಾಜೀನಾಮೆ ನೀಡಿರುವ ಮೈತ್ರಿಪಕ್ಷಗಳ ಶಾಸಕರು ಹಲವು ದಿನಗಳ ಬಳಿಕವೂ ತಮ್ಮ ಬಿಗಿಪಟ್ಟು ಮುಂದುವರಿಸಿದ್ದಾರೆ. ಅವರ ಮನವೊಲಿಸಲು ಮೈತ್ರಿ ನಾಯಕರು ಇನ್ನಿಲ್ಲದೆ ಮಾಡುತ್ತಿರುವ ಕಸರತ್ತು ಅಷ್ಟೇನೂ ಫಲಪ್ರದ ಕೊಡುವಂತೆ ತೋರುತ್ತಿಲ್ಲ. ಇದರಿಂದ ಸರಕಾರ ಉಳಿಸಿಕೊಳ್ಳುವುದು ಬಹುತೇಕ ಅಸಾಧ್ಯ ಎಂದು ಭಾವಿಸಿರುವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಕುಮಾರಸ್ವಾಮಿ ಅವರು ವಿಧಾನಸಭೆ ಅಧಿವೇಶನದಲ್ಲಿ ರಾಜೀನಾಮೆ ನೀಡುವ ಮುನ್ನ ವಿದಾಯದ ಭಾಷಣ ಮಾಡಲಿದ್ದಾರೆ ಎಂಬ ಸುದ್ದಿ ಇದೆ.
ಇದೇ ವೇಳೆ, ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಿಸುವುದಾಗಿ ಸ್ಪೀಕರ್ ಅವರಲ್ಲಿ ಕೋರಿಕೊಂಡಿರುವುದು ಸಾಕಷ್ಟು ಚರ್ಚೆಯ ವಿಷಯವಾಗಿದೆ. ಆದರೆ, ಯಾವುದೇ ನೋಟೀಸ್ ನೀಡದೇ ಸಿಎಂ ಅವರು ವಿಶ್ವಾಸ ಮತ ಯಾಚನೆಗೆ ಕೋರಿಕೊಂಡಿದ್ದರು. ಇದು ಒಂದಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚನೆ ಮಾಡುವುದಿದ್ದರೆ ಲಿಖಿತ ರೂಪದಲ್ಲಿ ಸ್ಪೀಕರ್ ಅಥವಾ ವಿಧಾನಸಭೆ ಕಾರ್ಯದರ್ಶಿಗೆ ನೋಟೀಸ್ ಕೊಡಬೇಕು ಎಂಬ ನಿಯಮವಿದೆ. ಆದರೆ, ಕುಮಾರಸ್ವಾಮಿ ಅವರು ಬಾಯಿ ಮಾತಲ್ಲೇ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಹೇಳಿದ್ದರಿಂದ ಅದು ಸಿಂಧುವಲ್ಲ ಎಂಬ ಮಾತಿದೆ.
ಆದರೆ, ವಿಧಾನಸಭೆ ಕಲಾಪದ ವೇಳೆಯೇ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆಯ ವಿಚಾರ ಪ್ರಸ್ತಾಪಿಸಿದ್ದರಿಂದ ಇದು ಅಧಿಕೃತಪವಾಗಿ ಕಡತಕ್ಕೆ ಸೇರಿಕೊಳ್ಳುತ್ತದೆ. ಸ್ಪೀಕರ್ ರಮೇಶ್ ಕುಮಾರ್ ಅವರೂ ಕೂಡ ವಿಶ್ವಾಸ ಮತ ಯಾಚನೆಯ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಹೀಗಾಗಿ, ಇದು ಅಧಿಕೃತವಾಗಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.
Comments are closed.